ಬೆಂಗಳೂರು: ರಾಜ್ಯಾದ್ಯಂತ ತಂಬಾಕು ಸೇವನೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದರು.
ವಿಧಾನಸೌಧಲ್ಲಿ ಸಚಿವ ಶ್ರೀರಾಮುಲು ಸುದ್ದಿಗೋಷ್ಠಿ ವಿಧಾನಸೌಧಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೋವಿಡ್-19 ಹಿನ್ನೆಲೆ ಎಲ್ಲೆಂದರಲ್ಲಿ ಉಗುಳುವ ಹಾಗಿಲ್ಲ. ಹೀಗಾಗಿ ತಂಬಾಕು ಸೇವಿಸುವುದನ್ನು ನಿಷೇಧಗೊಳಿಸಿ ಆದೇಶ ಹೊರಡಿಸಲಾಗಿದೆ. ತಂಬಾಕು ಜಗಿಯುವುದು, ಎಲ್ಲೆಂದರಲ್ಲಿ ಉಗುಳುವುದು ತಪ್ಪು ಎಂದರು.
ಪಾನ್ ಮಸಾಲ ಉತ್ಪನ್ನಗಳ ಸೇವನೆಯನ್ನೂ ನಿಷೇಧಿಸಲಾಗಿದೆ. ರಾಜ್ಯಾದ್ಯಂತ ತಂಬಾಕು ಸೇವನೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ತಿಂದು ಉಗುಳಬಾರದು. ತಂಬಾಕು ಜಗಿಯುವುದು ಕಂಡು ಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಇಮ್ರಾನ್ ಪಾಷಾ ನಡವಳಿಕೆ ಸಹಿಸಲ್ಲ:
ಪಾಲಿಕೆ ಸದಸ್ಯ ಇಮ್ರಾನ್ ಪಾಷಾ ಕ್ವಾರಂಟೈನ್ಗೆ ಹೋಗಲು ಹಿಂದೇಟು ಹಾಕಿದ ಸಂಬಂಧ ಪ್ರತಿಕ್ರಿಯಿಸಿದ ಅವರು, ಇಮ್ರಾನ್ ಪಾಷಾ ಅವರ ಈ ನಡವಳಿಕೆಯನ್ನು ಸರ್ಕಾರ ಸಹಿಸುವುದಿಲ್ಲ. ಕಾರ್ಪೋರೇಟರ್ ಇಮ್ರಾನ್ ಪಾಷಾಗೆ ಕೊರೊನಾ ಬಂದ ಮೇಲೆ ಅವರು ಸಹಕರಿಸಬೇಕು. ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕು. ಹೀಗೆ ತಪ್ಪಿಸಿಕೊಳ್ಳುವುದು ಸರಿಯಲ್ಲ. ಸರ್ಕಾರದಿಂದ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಕೊರೊನಾ ಬಂದು ಮುಚ್ಚಿಟ್ಟುಕೊಂಡರೆ ಎಲ್ಲರಿಗೂ ಸಮಸ್ಯೆ ಬರುತ್ತದೆ ಎಂದು ಎಚ್ಚರಿಕೆ ನೀಡಿದರು.
ಭ್ರಷ್ಟಾಚಾರ ಆಗಿಲ್ಲ:
ಪಿಪಿಇ ಕಿಟ್ ಸೇರಿದಂತೆ ಆರೋಗ್ಯ ಪರಿಕರಗಳ ಖರೀದಿಯಲ್ಲಿ ಅಕ್ರಮ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೋವಿಡ್ ವಿಚಾರದಲ್ಲಿ ಒಂದೇ ಒಂದು ರೂಪಾಯಿ ಭ್ರಷ್ಟಾಚಾರ ಆಗಿಲ್ಲ ಎಂದು ಸ್ಪಷ್ಟಪಡಿಸಿದರು. ಕಾಂಗ್ರೆಸ್ನವರಿಗೆ ಮಾಡಲು ಕೆಲಸವಿಲ್ಲ. ಅವರು ಸುಮ್ಮನೆ ಏನೇನೋ ಆರೋಪ ಮಾಡ್ತಿದ್ದಾರೆ. ಸರ್ಕಾರ ಎಲ್ಲಾ ಖರೀದಿಯನ್ನು ಪಾರದರ್ಶಕವಾಗಿ ನಡೆಸಿದೆ ಎಂದರು.