ಕರ್ನಾಟಕ

karnataka

ETV Bharat / city

ಮುಂದಿನ ಧಾರಾವಾಹಿಯಲ್ಲಿ ಜಿಕೆಜಿ ಅವರಿಂದ ಸಿಎಂ ಪಾತ್ರ ಮಾಡಿಸಬೇಕೆಂದಿದ್ದೆ: ಟಿ.ಎನ್ ಸೀತಾರಾಮ್ - ಪ್ರೊ. ಜಿ.ಕೆ. ಗೋವಿಂದರಾವ್ ನಿಧನಕ್ಕೆ

"ಮುಂದಿನ ಧಾರಾವಾಹಿಯಲ್ಲಿ ಕೋಪದ ವ್ಯಕ್ತಿತ್ವದ, ಆದರೆ ಅಂತಃಕರಣ ತುಂಬಿದ ಮುಖ್ಯಮಂತ್ರಿ ಪಾತ್ರ ಮಾಡಿಸಬೇಕೆಂದು ನಿನ್ನೆ ತಾನೇ ನನ್ನ ತಂಡದವರ ಜತೆ ಮಾತನಾಡುತ್ತಿದ್ದೆ. ಷೇಕ್ಸ್‌ಪಿಯರ್ ಸೃಷ್ಟಿಸಿದ ಪಾತ್ರಗಳನ್ನು ಎಷ್ಟು ಅದ್ಭುತವಾಗಿ ನಟಿಸಿ ಪಾಠ ಮಾಡುತ್ತಿದ್ದಿರಿ ಜಿ.ಕೆ.ಗೋವಿಂದ ರಾವ್ ಸಾರ್. ಇಷ್ಟು ಬೇಗ ವಿದಾಯ ಹೇಳುತ್ತೀರೆಂದು ಭಾವಿಸಿರಲಿಲ್ಲ" ಎಂದು ನಿರ್ದೇಶಕ ಟಿ.ಎನ್ ಸೀತಾರಾಮ್ ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

GK Govindrao and TN Sitaraman
ಪ್ರೊ. ಜಿ.ಕೆ. ಗೋವಿಂದರಾವ್ ಹಾಗು ಟಿ.ಎನ್ ಸೀತಾರಾಮ್

By

Published : Oct 15, 2021, 5:55 PM IST

ಬೆಂಗಳೂರು: ನಾಡಿನ ಹಿರಿಯ ರಂಗಕರ್ಮಿ, ಲೇಖಕ, ಕಿರುತೆರೆ, ಸಿನಿಮಾ ರಂಗದ ಮೇರು ನಟರಲ್ಲೊಬ್ಬರಾದ ಜಿ.ಕೆ.ಗೋವಿಂದರಾವ್ (86) ಇಂದು ನಿಧನರಾಗಿದ್ದು, ಅವರ ಒಡನಾಡಿಗಳು, ನಿರ್ದೇಶಕರು ಹಾಗು ಪ್ರಗತಿಪರ ಚಿಂತಕರು ಸಂತಾಪ ವ್ಯಕ್ತಪಡಿಸಿದ್ದಾರೆ.

ಅನೇಕ ಧಾರಾವಾಹಿಗಳಲ್ಲಿ ಜಿಕೆಜಿ ಅವರ ಜತೆ ಕೆಲಸ ಮಾಡಿದ್ದ ನಿರ್ದೇಶಕ ಟಿ.ಎನ್ ಸೀತಾರಾಮ್ ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಜಿಕೆಜಿ ಅವರ ಬಗ್ಗೆ ಬರೆಯುತ್ತಾ "ನಮ್ಮ ತಂಡದ ಅನೇಕ ಧಾರಾವಾಹಿಗಳಲ್ಲಿ ಮುಖ್ಯ ಪಾತ್ರಗಳನ್ನು ಮಾಡುತ್ತಾ, ನಮ್ಮೆಲ್ಲರಿಗೂ ತುಂಬಾ ಹತ್ತಿರವಾದವರು ನೀವು. ನಿಮ್ಮ ಜ್ಞಾನ ಪಾಂಡಿತ್ಯಕ್ಕಿಂತ ಹೆಚ್ಚಾಗಿ ಹೃದಯದ ಮೂಲಕ ಗೆಳೆಯರ ಜತೆ ಬಾಂಧವ್ಯ ಇಟ್ಟುಕೊಂಡವರು ನೀವು.‌ ನಿಮ್ಮ ಮುಖ ಸದಾ ನಗು, ಉಲ್ಲಾಸ ಗಳಿಂದ ತುಂಬಿರುತ್ತಿತ್ತು ಎಂದು ಬಣ್ಣಿಸಿದ್ದಾರೆ.

ಮುಖ್ಯಮಂತ್ರಿ ಪಾತ್ರ ಮಾಡಿಸಬೇಕೆಂದಿದ್ದೆ:

"ಮುಂದಿನ ಧಾರಾವಾಹಿಯಲ್ಲಿ ಕೋಪದ ವ್ಯಕ್ತಿತ್ವದ, ಆದರೆ ಅಂತಃಕರಣ ತುಂಬಿದ ಮುಖ್ಯಮಂತ್ರಿ ಪಾತ್ರ ಮಾಡಿಸಬೇಕೆಂದು ನಿನ್ನೆ ತಾನೇ ನನ್ನ ತಂಡದವರ ಜತೆ ಮಾತನಾಡುತ್ತಿದ್ದೆ. ಷೇಕ್ಸ್‌ಪಿಯರ್ ಸೃಷ್ಟಿಸಿದ ಪಾತ್ರಗಳನ್ನು ಎಷ್ಟು ಅದ್ಭುತವಾಗಿ ನಟಿಸಿ ಪಾಠ ಮಾಡುತ್ತಿದ್ದಿರಿ ಜಿ.ಕೆ.ಗೋವಿಂದ ರಾವ್ ಸಾರ್. ಇಷ್ಟು ಬೇಗ ವಿದಾಯ ಹೇಳುತ್ತೀರೆಂದು ಭಾವಿಸಿರಲಿಲ್ಲ" ಎಂದು ಬರೆದಿದ್ದಾರೆ.

ಜಿಕೆಜಿ ಬಗ್ಗೆ ನೆನಪು ಹಂಚಿಕೊಂಡು ಪೋಸ್ಟ್ ಮಾಡಿದ ಮಂಸೋರೆ

ಇನ್ನು ಹರಿವು, ನಾತಿಚರಾಮಿ, Act1978 ಮೊದಲಾದ ಅತ್ಯುತ್ತಮ ಚಿತ್ರಗಳನ್ನು ನಿರ್ದೇಶಿಸಿದ ಮಂಸೋರೆ ಅವರು, ಜಿಕೆಜಿ ಬಗ್ಗೆ ನೆನಪು ಹಂಚಿಕೊಂಡು ಪೋಸ್ಟ್ ಮಾಡಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಯಾವುದೋ ಕೆಲಸದ ನಿಮಿತ್ತ ಹೈದರಾಬಾದ್​​ಗೆ ಹೋಗಿದ್ದೆ. ಸಭೆ ಮಧ್ಯದಲ್ಲಿ ಒಂದು ಕಾಲ್ ಬಂತು.

ಅಪರಿಚಿತ ಸಂಖ್ಯೆ (unknown number) ಎಂದು ಸೈಲೆಂಟ್ ಮಾಡಬೇಕೆನ್ನುವಷ್ಟರಲ್ಲಿ ಟ್ರೂ ಕಾಲರ್ ಜಿ.ಕೆ ಗೋವಿಂದರಾವ್ ಅವರ ಹೆಸರು ತೋರಿಸಿತು. ಆಶ್ಚರ್ಯವಾಗಿ, ಅನುಮಾನದಿಂದಲೇ ಕಾಲ್ ರಿಸೀವ್ ಮಾಡಿದೆ. ಹಲೋ ಎಂಬ ಧ್ವನಿ ಕೇಳುತ್ತಲೇ ಗೋವಿಂದರಾವ್ ಸರ್ ಎಂದು ಖಚಿತವಾಯಿತು. ನನಗೋ ಖುಷಿ ಆಶ್ಚರ್ಯ.

ಜಿಕೆಜಿ ಸರ್ ನಮ್ಮ ACT 1978 ಸಿನೆಮಾ ನೋಡಿ, ಯಾರಿಂದಲೋ ನಂಬರ್ ತೆಗೆದುಕೊಂಡು ಕಾಲ್ ಮಾಡಿ, ಬಹಳ ದಿನಗಳ ನಂತರ ಕನ್ನಡದಲ್ಲಿ ಒಂದೊಳ್ಳೆ ಸಿನೆಮಾ ನೋಡಿದೆ. ಅದಕ್ಕೆ ಖುದ್ದಾಗಿ ಮಾತನಾಡಿ ಅಭಿನಂದನೆ ತಿಳಿಸೋಣ ಎಂದು ಕರೆ ಮಾಡಿದೆ ಎಂದು ಹೇಳಿ ನನ್ನ ಬಗ್ಗೆ ವಿಚಾರಿಸಿಕೊಂಡರು.

ಮೊದಲ ಸಿನೆಮಾ ಹರಿವು ಎಂದು ಹೇಳಿದಾಗ ಅವರು ನಟಿಸಿದ್ದ ಸಿನೆಮಾ ಬಗ್ಗೆ ಮೆಲುಕು ಹಾಕಿದರು. ಬಿಡುವು ಮಾಡಿಕೊಂಡು ಮನೆಗೆ ಬನ್ನಿ ಎಂದು ಹೇಳಿದ್ದರು. ಆದರೆ, ಸಮಯ ಕೂಡಿ ಬರಲೇ ಇಲ್ಲ. ಜಿಕೆಜಿ ಸರ್‌ಗೆ ಭಾವಪೂರ್ಣ ಶ್ರದ್ಧಾಂಜಲಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಚಿವ ಸುನೀಲ್ ಕುಮಾರ್ ಸಂತಾಪ:

ಕನ್ನಡ ರಂಗ ಭೂಮಿಯ ಪ್ರತಿಭಾನ್ವಿತ ನಟ, ಚಿಂತಕ ಪ್ರೊ. ಜಿ. ಕೆ. ಗೋವಿಂದರಾವ್ ಅವರ ನಿಧನಕ್ಕೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಜಿ. ಕೆ ಗೋವಿಂದರಾವ್ ಕನ್ನಡ ಸಾಂಸ್ಕೃತಿಕ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಬಹಳ ದೊಡ್ಡದು. ಸಮುದಾಯ ತಂಡದ ಸಕ್ರಿಯ ಸದಸ್ಯರಾಗಿದ್ದ ಜಿ.ಕೆ ಗೋವಿಂದರಾವ್ ಹೊಸ ಅಲೆಯ ಸಿನಿಮಾಗಳ ಮೂಲಕ ತಮ್ಮನ್ನು ಗುರುತಿಸಿಕೊಂಡರು. ಹವ್ಯಾಸಿ ರಂಗ ತಂಡಗಳ ಬೆಳವಣಿಗೆಗೆ ಅವರ ಕೊಡುಗೆ ಮಹತ್ವದ್ದು. ಅಧ್ಯಾಪಕರಾಗಿಯೂ ಅವರು ದೊಡ್ಡ ಶಿಷ್ಯವೃಂದ ಹೊಂದಿದ್ದವರು.

ಸಿನಿಮಾ ನಾಟಕ ಕಿರುತೆರೆ ಹೀಗೆ ಎಲ್ಲ ಪ್ರಕಾರಗಳಲ್ಲಿಯೂ ತಮ್ಮ ಛಾಪು ಮೂಡಿಸಿದ್ದ ಜಿ. ಕೆ ಗೋವಿಂದರಾವ್ ನಿಧನದಿಂದ ಕನ್ನಡ ಸಾಂಸ್ಕೃತಿಕ ಲೋಕ ಒಬ್ಬ ಪ್ರಖರ ಪ್ರತಿಭೆಯ ರಂಗಕರ್ಮಿ ಹಾಗೂ ಚಿಂತಕನನ್ನು ಕಳೆದುಕೊಂಡಂತಾಗಿದೆ ಎಂದು ಅವರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details