ಬೆಂಗಳೂರು: ಜನವರಿ 3 ರಂದೇ ಸಚಿವ ಅಶ್ವತ್ಥ್ ನಾರಾಯಣ್ಗೆ ಡಿಕೆಶಿ ರಾಮನಗರದ ವೇದಿಕೆಯಲ್ಲೇ ಮುಹೂರ್ತ ಇಟ್ಟಿದ್ರು ಎಂದು ಸಚಿವ ಮುನಿರತ್ನ ತಿಳಿಸಿದ್ದಾರೆ. ವಿಕಾಸಸೌಧಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಅಂದು ಅಶ್ವತ್ಥ್ ನಾರಾಯಣ್ ಎದೆ ಉಬ್ಬಿಸಿ ಮಾತನಾಡಿದ್ರು. ಆಗಲೇ ಇವರಿಗೆ ಏನಾದ್ರು ಮಾಡ್ತಾರೆ ಅಂದುಕೊಂಡಿದ್ದೆವು. ಅದು ಈಗ ಎಫೆಕ್ಟ್ ಆಗಿದೆ. ಯಾವುದೇ ದಾಖಲೆಗಳಿಲ್ಲದೆ ಆರೋಪಗಳನ್ನು ಮಾಡುತ್ತಿದ್ದಾರೆ. ಯಾರು ಡಿಕೆಶಿ ವಿರುದ್ಧ ಮಾತನಾಡುತ್ತಾರೋ ಅವರ ಹಿಂದೆ 10 ಜನ ಬಿಟ್ಟು ಏನಾದ್ರೂ ಇದ್ಯಾ ಹುಡುಕಿ ಅಂತಾರೆ ಎಂದು ಆರೋಪಿಸಿದರು.
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಕಾಂಗ್ರೆಸ್ ನಿರಂತರ ಆರೋಪ ಮಾಡುತ್ತಿದೆ. ಯಾವುದೇ ಆಧಾರವಿಲ್ಲದೆ ಆರೋಪ ಮಾಡ್ತಿದ್ದಾರೆ. ಅನುಭವದ ಕೊರತೆ ಇರುವವರು ಹೇಳಿದ್ರೆ ಬಿಡಬಹುದು. ಆದರೆ ಸಿಎಂ ಆಗಿದ್ದವರೇ ಹೇಳಿದರೆ ಹೇಗೆ? ಸಿದ್ದರಾಮಯ್ಯ ಹೇಳಿದರೆ ರಾಜ್ಯ ಸೂಕ್ಷ್ಮವಾಗಿ ಗಮನಿಸುತ್ತದೆ. ಅಂತಹ ಹಿರಿಯರು ದಾಖಲೆ ಆಮೇಲೆ ಕೊಡ್ತೇವೆ ಅಂತಾರೆ. ಅಶ್ವತ್ಥ್ ನಾರಾಯಣ್ಗೂ ಇದಕ್ಕೂ ಸಂಬಂಧವಿಲ್ಲ ಎಂದು ಮುನಿರತ್ನ ಸ್ಪಷ್ಟಪಡಿಸಿದರು.
ಸಿಐಡಿ ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ. ಯಾರು ಇನ್ವಾಲ್ವ್ ಇದ್ದಾರೋ ಅವರನ್ನು ವಿಚಾರಣೆ ಮಾಡ್ತಿದ್ದಾರೆ. ತನಿಖೆ ಮಾಡುವಂತೆ ಸರ್ಕಾರವೇ ಹೇಳ್ತಿದೆ. ಆದರೂ ಸಹ ಸಂಬಂಧ ಕಲ್ಪಿಸುವ ಕೆಲಸ ನಡೆದಿದೆ. ಊಹಾಪೋಹದ ಹೇಳಿಕೆ ನೀಡುತ್ತಿದ್ದಾರೆ. ಆಸ್ತಿ ಮಾರಿ ಸಾಲ ಮಾಡಿದರೆ ಅದನ್ನು ಇದಕ್ಕೆ ಕಲ್ಪಿಸ್ತಿದ್ದಾರೆ. ಚುನಾವಣೆ ಹತ್ತಿರವಿದೆ. ಅಧಿಕಾರಕ್ಕೆ ಬರಲ್ಲ ಅನ್ನೋದು ಅವರಿಗೆ ಗೊತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.