ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮಣ್ಣಲ್ಲಿ ಮಣ್ಣಾಗಿ ಈಗಾಗಲೇ ಒಂದು ರಾತ್ರಿ ಕಳೆದಿದೆ. ಐದನೇ ದಿನ ಹಾಲು-ತುಪ್ಪ ಕಾರ್ಯ ನೆರವೇರುವವರೆಗೂ ಸಾರ್ವಜನಿಕರಿಗೆ ಕಂಠೀರವ ಸ್ಟುಡಿಯೋಗೆ ಪ್ರವೇಶವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಲಗ್ಗೆರೆ ರಿಂಗ್ ರಸ್ತೆಯಲ್ಲಿರುವ ಕಂಠೀರವ ಸ್ಟುಡಿಯೋ ಬಳಿ ಬಿಗಿಭದ್ರತೆ ಕೈಗೊಳ್ಳಲಾಗಿದೆ. ಸ್ಥಳೀಯ ಪೊಲೀಸರು, ಕೆ.ಎಸ್.ಆರ್.ಪಿ ತುಕಡಿ ಸೇರಿದಂತೆ ಆರ್.ಎ.ಎಫ್ ತಂಡ ಸ್ಥಳದಲ್ಲೇ ಮೊಕ್ಕಾಂ ಹೂಡಿದೆ. ಸ್ಟುಡಿಯೋ ಬಳಿಯೇ ನಿಂತು ಜನರು ಸಮಾಧಿ ನೋಡುತ್ತಿದ್ದಾರೆ. ಆದರೆ ಯಾರನ್ನು ಒಳಗೆ ಬಿಡುತ್ತಿಲ್ಲ.
ಬೆಂಗಳೂರಿನ ಕಂಠೀರವ ಸ್ಟುಡಿಯೋ ಅಪ್ಪು ಸಮಾಧಿ ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಕಂಠೀರವ ಸ್ಟುಡಿಯೋ ಕಡೆ ಆಗಮಿಸುತ್ತಿದ್ದಾರೆ. ಆದರೆ ಅಭಿಮಾನಿಗಳಿಗೆ, ಸಾರ್ವಜನಿಕರಿಗೆ ಸಮಾಧಿ ಸ್ಥಳಕ್ಕೆ ತೆರಳಲು ನಿರ್ಬಂಧಿಸಲಾಗಿದೆ. ಹೀಗಾಗಿ ಕಂಠೀರವ ಸ್ಟುಡಿಯೋ ಹೊರಗೆ ನಿಂತು ಅಪ್ಪು ಅಭಿಮಾನಿಗಳು ರೋಧಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಸಾವಿರಾರು ಸಂಖ್ಯೆಯಲ್ಲಿ ಕಂಠೀರವ ಸ್ಟುಡಿಯೋ ಬಳಿ ಜನರು ಆಗಮಿಸುತ್ತಿರುವ ಹಿನ್ನೆಲೆ ಒಂದು ವಾರದವರೆಗೆ ಪೊಲೀಸ್ ಬಿಗಿ ಭದ್ರತೆ ಮುಂದುವರೆಸುವ ಸಾಧ್ಯತೆ ಇದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.