ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಕಟ್ಟಡ ಕುಸಿದಿದೆ. ಡೈರಿ ವೃತ್ತ ಬಳಿಯ ಕೆಎಂಎಫ್ ಕ್ವಾಟರ್ಸ್ನಲ್ಲಿರುವ ಮೂರು ಅಂತಸ್ತಿನ ಕಟ್ಟಡ ಭಾಗಶಃ ಕುಸಿದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ. ಈ ಹಳೆಯ ಕ್ವಾಟರ್ಸ್ನಲ್ಲಿ 18 ಮನೆಗಳಿವೆ.
ಸ್ಥಳೀಯ ನಿವಾಸಿ ಬಾಲಕೃಷ್ಣ ಪ್ರತಿಕ್ರಿಯೆ 'ಕಟ್ಟಡ ಕುಸಿಯುವ ಬಗ್ಗೆ ಇಂದು ಬೆಳಿಗ್ಗೆ ಇಂಜಿನಿಯರ್ ಅವರಿಗೆ ತಿಳಿಸಲಾಗಿತ್ತು. ಅವ್ರು ಬಂದು ತಕ್ಷಣವೇ ಎಲ್ಲರೂ ಮನೆಯಿಂದ ಆಚೆ ಬರುವಂತೆ ಸೂಚಿಸಿದರು. ನಾವೆಲ್ಲರೂ ಮನೆಯಿಂದ ಹೊರಗೆ ಓಡಿಬಂದ 5 ನಿಮಿಷದಲ್ಲಿ 9:30ರ ಸುಮಾರಿಗೆ ಕಟ್ಟಡ ಕುಸಿಯಿತು. ನಮ್ಮ ಸಾಮಾನುಗಳೆಲ್ಲ ಮನೆಯೊಳಗೇ ಇವೆ' ಎಂದು ಕಟ್ಟಡದಲ್ಲಿ ವಾಸವಿರುವ ಬಾಲಕೃಷ್ಣ ಎಂಬುವವರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ನಿನ್ನೆಯಷ್ಟೇ ವಿಲ್ಸನ್ ಗಾರ್ಡನ್ ಬಳಿಯ ಲಕ್ಕಸಂದ್ರದಲ್ಲಿ ಇದ್ದಕ್ಕಿದ್ದಂತೆ ಮೂರು ಅಂತಸ್ತಿನ ಕಟ್ಟಡ ಕುಸಿದ ಘಟನೆ ನಡೆದಿತ್ತು. ಆ ಬೆನ್ನಲ್ಲೇ ಇಂದು ಮತ್ತೊಂದು ಕಟ್ಟಡ ಕುಸಿದಿದೆ. ಕಳೆದ ಒಂದು ವಾರದಿಂದ ಬೆಂಗಳೂರಲ್ಲಿ ಒಂದಲ್ಲ ಒಂದು ಅನಾಹುತಗಳು ನಡೆಯುತ್ತಲೇ ಇವೆ.
(Live video: ಬೆಂಗಳೂರಿನಲ್ಲಿ ನೋಡ ನೋಡುತ್ತಿದ್ದಂತೆ ಕಟ್ಟಡ ಕುಸಿತ.. ಸ್ವಲ್ಪದರಲ್ಲೇ ತಪ್ಪಿದ ಅನಾಹುತ)