ಬೆಂಗಳೂರು:ನಾಳೆಯಿಂದ ನವೆಂಬರ್ 26ರ ವರೆಗೆ ಮೂರು ದಿನ ಮೈಸೂರು, ಚಾಮರಾಜನಗರ ಜಿಲ್ಲಾ ಪ್ರವಾಸಕ್ಕೆ ಸಿಎಂ ತೆರಳುತ್ತಿದ್ದು, ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡದೇ ಕೇವಲ ಮಲೆಮಹದೇಶ್ವರ ಬೆಟ್ಟಕ್ಕೆ ಮಾತ್ರ ಭೇಟಿ ನೀಡುತ್ತಿದ್ದಾರೆ.
ನಾಳೆ ಸಂಜೆ 4 ಗಂಟೆಗೆ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ಹೆಲಿಕ್ಯಾಪ್ಟರ್ ಮೂಲಕ ಮೈಸೂರಿಗೆ ತೆರಳಲಿರುವ ಸಿಎಂ ಬಿಎಸ್ವೈ 4.50ಕ್ಕೆ ಮೈಸೂರು ವಿಮಾನ ನಿಲ್ದಾಣ ತಲುಪಲಿದ್ದಾರೆ. ಸಂಜೆ 5 ಗಂಟೆಗೆ ಮೈಸೂರು ನಗರದಲ್ಲಿ ಪೊಲೀಸ್ ಆಯುಕ್ತರ ನೂತನ ಕಚೇರಿ ಉದ್ಘಾಟನೆ ಹಾಗೂ ಪೊಲೀಸ್ ವಸತಿಗೃಹ ಯೋಜನೆಯಡಿ ನಿರ್ಮಿಸಿರುವ 108 ವಸತಿಗೃಹಗಳ ನಿರ್ಮಾಣ ಕಾಮಗಾರಿಗಳ ಉದ್ಘಾಟನೆ ನೆರವೇರಿಸಲಿದ್ದಾರೆ. ಸಂಜೆ 7 ಗಂಟೆಗೆ ಲಲಿತ್ ಮಹಲ್ನಲ್ಲಿ ಕುಟುಂಬ ಸಂಬಂಧಿ ಅಜಯ್ ವಿವಾಹದ ಆರತಕ್ಷತೆ ಸಮಾರಂಭದಲ್ಲಿ ಭಾಗಿಯಾಗಲಿದ್ದು, ಅಂದು ರಾತ್ರಿ ಮೈಸೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ನವೆಂಬರ್ 25ರಂದು ಬೆಳಗ್ಗೆ 9 ಗಂಟೆಗೆ ಲಲಿತ್ ಮಹಲ್ನಲ್ಲಿ ಅಜಯ್ ವಿವಾಹ ಮುಹೂರ್ತದಲ್ಲಿ ಸಿಎಂ ಯಡಿಯೂರಪ್ಪ ಭಾಗಿಯಾಗಲಿದ್ದಾರೆ. 10.30ಕ್ಕೆ ಸುತ್ತೂರು ಕ್ಷೇತ್ರಕ್ಕೆ ಭೇಟಿ ನೀಡಲಿರುವ ಸಿಎಂ, ಗ್ರಾಮದೇವತೆ ದೊಡ್ಡಮ್ಮತಾಯಿ ದೇವಸ್ಥಾನ ಮೂರ್ತಿ ಪ್ರತಿಷ್ಠಾಪನೆಯ ಉದ್ಘಾಟನೆ, ಸುತ್ತೂರು ಮಠದ ಅತಿಥಿಗೃಹ ಹಾಗೂ ಇತರ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.
11.45ಕ್ಕೆ ಸುತ್ತೂರು ಹೆಲಿಪ್ಯಾಡ್ನಿಂದ ಹೊರಟು 12.05ಕ್ಕೆ ಮುಡುಕುತೊರೆ ಹೆಲಿಪ್ಯಾಡ್ಗೆ ಆಗಮಿಸಲಿರುವ ಸಿಎಂ,12.30ಕ್ಕೆ ಭ್ರಮರಾಂಬಾ ಸಮೇತ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಸಂಕೀರ್ಣದ ಪುನರ್ ರ್ನಿರ್ಮಾಣ ಶಂಕುಸ್ಥಾಪನೆ ನೆರವೇರಿಸಿ ಸಭಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ನಂತರ ತಲಕಾಡು ಪ್ರವಾಸಿ ಮಂದಿರದಲ್ಲಿ ಸ್ವಲ್ಪ ಸಮಯ ವಿಶ್ರಾಂತಿ ಪಡೆದು, ಮಧ್ಯಾಹ್ನ 2.30 ಕ್ಕೆ ಡಿಸೆಂಬರ್ 14ರಂದು ಜರುಗಲಿರುವ ಪಂಚಲಿಂಗದರ್ಶನ ಆಚರಣೆ ಸಂಬಂಧ ಜಿಲ್ಲಾಮಟ್ಟದ ಅಧಿಕಾರಿಗಳ ಜೊತೆ ಪೂರ್ವಭಾವಿ ಸಭೆ ನಡೆಸಲಿದ್ದಾರೆ.
3.30ಕ್ಕೆ ಮುಡುಕುತೊರೆ ಹೆಲಿಪ್ಯಾಡ್ನಿಂದ ಹೊರಟು ಸಂಜೆ 4 ಗಂಟೆಗೆ ಮಲೆಮಹದೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಸಂಜೆ 4.30ಕ್ಕೆ ಸಾಲೂರು ಮಠಕ್ಕೆ ಭೇಟಿ ನೀಡಲಿರುವ ಸಿಎಂ ಸಂಜೆ 5 ಗಂಟೆಗೆ ಮಲೆ ಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಿ ಅಂದು ರಾತ್ರಿ ಶ್ರೀಕ್ಷೇತ್ರದಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ನವೆಂಬರ್ 26 ರಂದು ಬೆಳಗ್ಗೆ 8.30ಕ್ಕೆ ಮಲೆ ಮಹದೇಶ್ವರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. 9 ಗಂಟೆಗೆ ಬೆಟ್ಟದಲ್ಲಿರುವ ಸುತ್ತೂರು ಶಾಖಾಮಠಕ್ಕೆ ಭೇಟಿ ನೀಡಲಿದ್ದಾರೆ. 10.15 ಕ್ಕೆ ಮಲೆಮಹದೇಶ್ವರ ಬೆಟ್ಟದ ಪ್ರಾಧಿಕಾರದ ಸಭಾಂಗಣದಲ್ಲಿ ಸಂವಿಧಾನ ದಿನಾಚರಣೆ ನಿಮಿತ್ತ ಭಾರತದ ಸಂವಿಧಾನದ ಪ್ರಸ್ತಾವನೆ ಓದುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. 10.30ಕ್ಕೆ ವಿವಿಧ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆಯೋಜಿಸಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ತಾಳ ಬೆಟ್ಟದಿಂದ ಶ್ರೀಕ್ಷೇತ್ರ ಮಹದೇಶ್ವರ ಬೆಟ್ಟದವರೆಗೆ ನಿರ್ಮಿಸಲು ಉದ್ದೇಶಿಸಿರುವ ಪಾದಚಾರಿ ಮೆಟ್ಟಿಲುಗಳ ಯೋಜನೆ, ಭಕ್ತಾದಿಗಳ ಸರದಿ ಸಾಲು ನಿರ್ಮಾಣ ಕಾಮಗಾರಿ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ನೆರವೇರಿಸಲಿದ್ದಾರೆ. ನಂತರ 12 ಗಂಟೆಗೆ ಮಹದೇಶ್ವರ ಸ್ವಾಮಿ ಬೆಟ್ಟದ ಹೆಲಿಪ್ಯಾಡ್ನಿಂದ ಹೊರಟು 12.50ಕ್ಕೆ ಬೆಂಗಳೂರಿಗೆ ವಾಪಸಾಗಲಿದ್ದಾರೆ.
ಜಿಲ್ಲೆಯಲ್ಲೇ ವಾಸ್ತವ್ಯ ಹೂಡಿದರೂ ಜಿಲ್ಲಾ ಕೇಂದ್ರಕ್ಕಿಲ್ಲ ಭೇಟಿ:
ಚಾಮರಾಜನಗರ ಜಿಲ್ಲಾ ಪ್ರವಾಸಕ್ಕೆ ಸಿಎಂ ತೆರಳುತ್ತಿದ್ದು, ಒಂದು ದಿನ ಅಲ್ಲಿಯೇ ವಾಸ್ತವ್ಯ ಹೂಡಿದರೂ ಜಿಲ್ಲಾ ಕೇಂದ್ರಕ್ಕೆ ಮಾತ್ರ ಸಿಎಂ ಭೇಟಿ ನೀಡುತ್ತಿಲ್ಲ. ಮಲೆಮಹದೇಶ್ವರ ಬೆಟ್ಟಕ್ಕೆ ಮಾತ್ರ ಸಿಎಂ ಯಡಿಯೂರಪ್ಪ ಭೇಟಿ ನೀಡುತ್ತಿದ್ದಾರೆ. ಈ ಜಿಲ್ಲೆಯ ಜಿಲ್ಲಾ ಕೇಂದ್ರಕ್ಕೆ ಹೋದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎನ್ನುವ ಮೌಡ್ಯಕ್ಕೆ ಯಡಿಯೂರಪ್ಪ ಕಟ್ಟುಬಿದ್ದಿದ್ದಾರೆ ಎನ್ನಲಾಗಿದ್ದು ಅಧಿಕಾರ ಕಳೆದುಕೊಳ್ಳುವ ಆತಂಕದ ಹಿನ್ನೆಲೆ ಬರಿ ಮಲೈ ಮಹದೇಶ್ವರ ಬೆಟ್ಟಕ್ಕೆ ಮಾತ್ರ ಭೇಟಿ ಕೊಟ್ಟು ವಾಪಸ್ ಆಗಲಿದ್ದಾರೆ ಎನ್ನಲಾಗಿದೆ.