ಬೆಂಗಳೂರು: ಪೌರ ಕಾರ್ಮಿಕರ ಕುಂದುಕೊರತೆ ಆಲಿಸುವಲ್ಲಿ ವಿಫಲರಾಗಿರುವ ಕಾರ್ಯಪಾಲಕ ಅಭಿಯಂತರ ಸೇರಿದಂತೆ ಮೂವರನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ಗೌರವ ಗುಪ್ತ ಅಮಾನತುಗೊಳಿಸಿ ಆದೇಶಿಸಿದ್ದಾರೆ. ಕಾರ್ಯಪಾಲಕ ಅಭಿಯಂತರ ಬಿ.ಪ್ರಭಾಕರ್, ವ್ಯವಸ್ಥಾಪಕ ಕೆ.ಪಿ.ಸುರೇಶ್ ಕುಮಾರ್ ಹಾಗೂ ದ್ವಿತೀಯ ದರ್ಜೆ ಸಹಾಯಕ ಮಂಜುನಾಥ್ ಅಮಾನತಾದವರು. ಪೂರ್ವ ವಲಯದ ಸಿ.ವಿ.ರಾಮನ್ ನಗರ ಘನತ್ಯಾಜ್ಯ ನಿರ್ವಹಣೆ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಈ ಮೂವರು ಪೌರ ಕಾರ್ಮಿಕರ ಕುಂದು ಕೊರತೆಗಳ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ನೂರಾರು ನೌಕರರು ಬಿಬಿಎಂಪಿ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಡಾ.ಬಾಬು ಅವರಿಗೆ ದೂರು ನೀಡಿದ್ದರು.
ಸಮಸ್ಯೆಗಳನ್ನು ಆಲಿಸದೆ ಕುಂಟು ನೆಪವೊಡ್ಡಿ ವೇತನ ಭತ್ಯೆ ಕಡತಗಳನ್ನು ವಿಲೇವಾರಿ ಮಾಡಿರಲಿಲ್ಲ. ಈ ಕುರಿತಂತೆ ಸಂಬಂಧಪಟ್ಟವರಿಗೆ ಬಾಬು ದೂರು ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ, ಆಧಿಕಾರಿಗಳ ಧೋರಣೆಯ ವಿರುದ್ಧ ಮುಖ್ಯ ಆಯುಕ್ತ ಗೌರವ ಗುಪ್ತ ಅವರಿಗೆ ದೂರು ನೀಡಲಾಗಿತ್ತು ಎಂದು ಬಾಬು ತಿಳಿಸಿದ್ದಾರೆ.