ಬೆಂಗಳೂರು: ಜಗಜೀವನರಾಮ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ತಡರಾತ್ರಿ ಯುವಕನನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಚಂದ್ರು ಕೊಲೆಯಾದ ದುದೈರ್ವಿ. ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಶಾಹಿದ್ ಎಂದು ಒಂದೇ ಹೆಸರಿಟ್ಟುಕೊಂಡ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಐಟಿಐ ಪದವೀಧರನಾಗಿರುವ ಚಂದ್ರು ರೈಲ್ವೆ ಇಲಾಖೆಯಲ್ಲಿ ತಾತ್ಕಾಲಿಕವಾಗಿ ಫಿಟ್ಟರ್ ಕೆಲಸ ಮಾಡಿಕೊಂಡಿದ್ದ. ನಿನ್ನೆ ತನ್ನ ಸ್ನೇಹಿತ ಸೈಮನ್ ಹುಟ್ಟು ಹಬ್ಬವಿತ್ತು. ಹೀಗಾಗಿ ತಡರಾತ್ರಿಯವರೆಗೂ ಪಾರ್ಟಿ ಮಾಡಿ ಊಟಕ್ಕಾಗಿ ಅಲೆದಾಡಿದ್ದಾರೆ. ತಾನಿರುವ ಛಲವಾದಿ ಪಾಳ್ಯದಲ್ಲಿ ಯಾವುದೇ ಹೊಟೇಲ್ಗಳು ಓಪನ್ ಇರಲಿಲ್ಲ.
ರಂಜಾನ್ ಟೈಮ್ ಆಗಿರುವುದರಿಂದ ಜೆ.ಜೆ.ನಗರಕ್ಕೆ ಹೋದರೆ ಚಿಕನ್ ರೋಲ್ಗಳು ಸಿಗುತ್ತದೆ ಎಂದು ಬೈಕ್ನಲ್ಲಿ ಸ್ನೇಹಿತ ಸೈಮನ್ ನನ್ನು ಕೂರಿಸಿಕೊಂಡು ಛಲವಾದಿ ಪಾಳ್ಯದ ಪಕ್ಕದಲ್ಲೇ ಇರುವ ಜೆಜೆ ನಗರಕ್ಕೆ ಬಂದಿದ್ದಾರೆ. ಈ ವೇಳೆ, ಅಪರಿಚಿತರ ಯುವಕರ ಬೈಕ್ಗೆ ಚಂದ್ರುವಿನ ಬೈಕ್ ಟಚ್ ಆಗಿದೆ. ಪರಿಣಾಮ, ಎರಡೂ ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದೆ.