ಬೆಂಗಳೂರು :ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಜಾಮೀನು ರಹಿತ ಅಪರಾಧವಾಗಿ ಮಾಡಲು ಕಠಿಣ ಕಾನೂನು ತಿದ್ದುಪಡಿ ತರಲಿದ್ದೇವೆ. ತಪ್ಪಿತಸ್ಥರಿಗೆ ಗಂಭೀರ ರೀತಿಯ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷೆ ಹೆಚ್ಚಿಸಲು ಕ್ರಮವಹಿಸುತ್ತೇವೆ. ಪ್ರಶ್ನೆ ಪತ್ರಿಕೆ ಸೋರಿಕೆ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ತಿಳಿಸಿದರು.
ವಿಕಾಸಸೌಧದಲ್ಲಿ ಪದವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಪೇಪರ್ ಲೀಕ್ ಈ ಮೊದಲೂ ಆಗುತ್ತಿತ್ತು. ಆಯಾ ವಿವಿಗಳಿಗೆ ಸ್ವಾಯತ್ತತೆ ಇದೆ. ಆ ತರ ಆದರೆ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮವಹಿಸಲಾಗುತ್ತದೆ. ಜಾಮೀನು ರಹಿತ ಅಪರಾಧವಾಗಿ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ನೀಟ್ ಮಾದರಿ ಗೈಡ್ ಲೈನ್ಸ್ :ಸಿಇಟಿ ಪರೀಕ್ಷೆಯಲ್ಲಿ ನೀಟ್ ಮಾದರಿಯ ಮಾರ್ಗಸೂಚಿ ಇರಲಿದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ಸಿಇಟಿ ಪರೀಕ್ಷೆಯಲ್ಲಿ ಹಿಜಾಬ್ಗೆ ಅವಕಾಶ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ನೀಟ್ ಮಾದರಿಯಲ್ಲಿ ಸಿಇಟಿಯಲ್ಲೂ ಗೈಡ್‌ಲೈನ್ಸ್ ಇರಲಿದೆ. ಆ ಗೈಡ್ ಲೈನ್ಸ್ನ್ನು ಇಲ್ಲೂ ಅನುಸರಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
ರಾಜಕೀಯ ಪ್ರೇರಿತ ದೂರು :ಮಂಡ್ಯದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆರೋಪ ರಾಜಕೀಯ ಪ್ರೇರಿತವಾಗಿದೆ ಎಂದು ತಿಳಿಸಿದರು. ಕಾಂಗ್ರೆಸ್ ನಾಯಕರ ಆರೋಪಕ್ಕೆ ಡಾ.ಅಶ್ವತ್ಥ್ ನಾರಾಯಣ ಸ್ಪಷ್ಟನೆ ನೀಡುತ್ತ, ನಾನು ನಿಯಮಬಾಹಿರವಾಗಿ ಪ್ರಚಾರಕ್ಕೆ ಹೋಗಿಲ್ಲ. ನಿಯಮದ ಪ್ರಕಾರ ಪ್ರಚಾರಕ್ಕೆ ಹೋಗಿದ್ದೇನೆ. ಮತದಾರರ ಬಳಿಗೆ ಹೋಗಿ ಮತಯಾಚನೆ ಮಾಡಿದ್ದೇನೆ.