ಬೆಂಗಳೂರು: ಮೂರನೇ ಅಲೆ ಮಕ್ಕಳ ಮೇಲೆ ಪ್ರಭಾವ ಬೀರಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದು, ಅದಕ್ಕಾಗಿ ಮಕ್ಕಳ ತಜ್ಞರನ್ನು ಒಳಗೊಂಡ ಕಾರ್ಯಪಡೆ ರಚಿಸಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಸಿಎಂ ಜೊತೆಗಿನ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ನಿಯಂತ್ರಣ ಕುರಿತು ರಾಜ್ಯದಲ್ಲಿ ಕೈಗೊಂಡ ಕ್ರಮದ ಕುರಿತು ಸಿಎಂ ಅಧ್ಯಕ್ಷತೆಯಲ್ಲಿ ಪ್ರತಿ ಎರಡು ದಿನಕ್ಕೊಮ್ಮೊ ಸಚಿವರು, ಅಧಿಕಾರಿಗಳ ಸಭೆ ನಡೆಸಲು ನಿರ್ಧರಿಸಿದ್ದು, ಅದರಂತೆ ಇಂದು ಸಭೆ ನಡೆಸಲಾಯಿತು ಎಂದರು.
ಕೋವಿಡ್ ಮೂರನೇ ಅಲೆ ಎಫೆಕ್ಟ್ ಕುರಿತು ಸಚಿವ ಆರ್. ಅಶೋಕ್ ಹೇಳಿಕೆ ಸಭೆಯಲ್ಲಿ ಬೆಡ್ಗಳ ವ್ಯವಸ್ಥೆ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಇನ್ಮುಂದೆ ಕೋವಿಡ್ ಸೋಂಕಿತರನ್ನು ನೇರವಾಗಿ ಆಸ್ಪತ್ರೆಗೆ ದಾಖಲಿಸಲ್ಲ. ಮೊದಲು ಕೋವಿಡ್ ಕೇರ್ ಸೆಂಟರ್ಗೆ ದಾಖಲು ಮಾಡಬೇಕು. ನಂತರ ಅವರ ಆರೋಗ್ಯ ಸ್ಥಿತಿ ನೋಡಿ ಆಸ್ಪತ್ರೆಗೆ ಸೇರಿಸಬೇಕೋ ಅಥವಾ ಐಸಿಯುಗೆ ದಾಖಲಿಸಬೇಕೋ ಎಂಬ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ಬೆಂಗಳೂರಿನಲ್ಲಿ ಆಕ್ಸಿಜನ್ ಬೇಕು ಎಂದು ಸೋಂಕಿತರು ಆಸ್ಪತ್ರೆಗೆ ಅಲೆದಾಟ ನಡೆಸುತ್ತಿದ್ದಾರೆ. ನಾನು ಬೊಮ್ಮಾಯಿ, ಖಾಸಗಿ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರ ಸಭೆ ಕರೆದು ಚರ್ಚಿಸಿದ್ದು, ಈಗ ಪರಿಸ್ಥಿತಿ ಸುಧಾರಣೆ ಕಂಡಿದೆ. ಬೇಡಿಕೆಯಂತೆ ಬೆಡ್ ಕೊಡಲಾಗಿದೆ, ಉಚಿತವಾಗಿ ಸರ್ಕಾರವೇ ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ವೆಂಟಿಲೇಟರ್ ನೀಡುತ್ತಿದೆ ಎಂದರು.
ಆಮ್ಲಜನಕದ ಕೊರತೆಯಲ್ಲಿ ಈಗ ಸುಧಾರಣೆ ಕಾಣುತ್ತಿದೆ. ಬೆಂಗಳೂರು ಮತ್ತು ಸುತ್ತಮುತ್ತ ವಿನೂತನ ವ್ಯವಸ್ಥೆ ಜಾರಿಗೆ ಮುಂದಾಗಿದ್ದು, ಆಕ್ಸಿಜನ್ ಕಾನ್ಸನ್ಟ್ರೇಟರ್ ಗಳನ್ನು ಎಲ್ಲ ಕೋವಿಡ್ ಸೆಂಟರ್ನಲ್ಲಿ ತಲಾ 25-30 ರಷ್ಟು ಅಳವಡಿಕೆ ಮಾಡಲಾಗುತ್ತದೆ. ಬೆಂಗಳೂರಿನಲ್ಲಿ 2000 ಅಳವಡಿಸಲು ಸಿದ್ದತೆ ಮಾಡಿಕೊಂಡಿದ್ದು, ಈಗಾಗಲೇ 500 ಅಳವಡಿಸಲಾಗಿದೆ, ನಾಳೆಯಿಂದ ಉಳಿದವು ಅಳವಡಿಕೆ ಮಾಡಲಾಗುತ್ತದೆ ಎಂದು ತಿಳಿಸಿದರು.
90-95 ರ ಮಟ್ಟದಲ್ಲಿ ಆಕ್ಸಿಜನ್ ಲೆವೆಲ್ ಇದ್ದರೆ ಅವರಿಗೆ ಐಸಿಯು ಅಗತ್ಯವಿಲ್ಲ, ಅವರಿಗೆ ಕೋವಿಡ್ ಕೇರ್ ಸೆಂಟರ್ ಸಾಕು. ಅಲ್ಲಿಯೇ ಅವರಿಗೆ ಆಮ್ಲಜನಕ ಕೊಡುವ ವ್ಯವಸ್ಥೆ ಮಾಡುತ್ತೇವೆ. ಕೋವಿಡ್ ಕೇರ್ ಸೆಂಟರ್ಗಳಲ್ಲಿ ಔಷದೋಪಚಾರ, ಊಟ, ಆಕ್ಸಿಜನ್ ಕೊಡೋ ವ್ಯವಸ್ಥೆ ಆಗಲಿದೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಆಮ್ಲಜನಕ ಉತ್ಪಾದನೆಗೆ ಸರ್ಕಾರ ಆಧ್ಯತೆ ನೀಡಲಿದ್ದು, ಮೆಡಿಕಲ್ ಕಾಲೇಜಿನಲ್ಲಿ ಆಮ್ಲಜನಕ ಉತ್ಪಾದನೆಗೆ ಶೇ.75ರಷ್ಟು ಹಣವನ್ನು ಸರ್ಕಾರವೇ ಕೊಡಲಿದೆ. ಬಾಕಿ 25ರಷ್ಟು ಅವರು ಹಾಕಿದರೆ ಸಾಕು, ಯಾವ ಮೆಡಿಕಲ್ ಕಾಲೇಜು ಆಮ್ಲಜನಕ ಉತ್ಪಾದನೆ ಮುಂದೆ ಬರಲಿದೆಯೋ ಅವರಿಗೆ ಅಗತ್ಯ ಸಹಕಾರ ಮತ್ತು ಶೇ.75 ರ ಸಬ್ಸಿಡಿ ನೀಡಲಿದ್ದೇವೆ. ಸಮರೋಪಾದಿಯಲ್ಲಿ ಮೂರನೇ ಅಲೆಗೆ ಸರ್ಕಾರ ಸಿದ್ದತೆ ಮಾಡಲಿದೆ ಎಂದರು.
ಮಕ್ಕಳಿಗೆ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗುತ್ತದೆ, ಈಗಾಗಲೇ ಈ ಬಗ್ಗೆ ವರದಿ ನೀಡಲು ತಜ್ಞರ ಸಮಿತಿಗೆ ಸೂಚಿಸಿದ್ದು, ತಜ್ಞರು ಕೊಡುವ ವರದಿಯ ಆಧಾರದಲ್ಲಿ ಮಕ್ಕಳಿಗೆ ಕೋವಿಡ್ ಕೇರ್ ಸೆಂಟರ್ ಆರಂಭ ಮಾಡುತ್ತೇವೆ ಎಂದರು.