ಬೆಂಗಳೂರು:ನೆರೆ-ಪ್ರವಾಹದಿಂದಾಗಿ ಮನೆ ಕಳೆದುಕೊಂಡವರಿಗೆ ಪರಿಹಾರ ಧನ ಹೆಚ್ಚಳದ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸದ ಬಳಿ ಮಾತಾನಾಡಿದ ಅವರು, ಕೇಂದ್ರ ಗೃಹ ಸಚಿವರೇ ಬಂದು ರಾಜ್ಯದಲ್ಲಿ ಸರ್ವೆ ಮಾಡಿದ್ದಾರೆ. ಸಿಎಂ ಕೂಡಾ ಅಮಿತ್ ಶಾ ಅವರಿಗೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಕೇಂದ್ರದಿಂದ ಹಣ ಬೇಗ ಬಿಡುಗಡೆ ಆಗುವ ವಿಶ್ವಾಸ ಇದೆ ಎಂದರು.
ನಾನು ಮೂರ್ನಾಲ್ಕು ಜಿಲ್ಲೆಗಳಿಗೆ ಭೇಟಿ ನೀಡಿದ್ದೆ. ಎಲ್ಲಾ ಅಧಿಕಾರಿಗಳು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ. ಮನೆ ಕಳೆದುಕೊಂಡವರಿಗೆ ಪರಿಹಾರ ಧನ ತಕ್ಷಣವೇ ನೀಡುವ ಕೆಲಸವಾಗುತ್ತಿದೆ. ಹಿಂದೆ ತಹಶಿಲ್ದಾರ್ ಕಚೇರಿಗೆ ಅಲೆಯಬೇಕಿತ್ತು. ಆದರೆ ಈಗ ಅಂತಹ ಪರಿಸ್ಥಿತಿ ಇಲ್ಲ. ಮನೆ ಬಿದ್ದವರಿಗೆ ಈಗ ಘೋಷಣೆ ಮಾಡಿರೋ ಪರಿಹಾರ ಧನ ಸಾಲಲ್ಲ. ಮತ್ತಷ್ಟು ಹೆಚ್ಚಳ ಮಾಡಿ ಎಂದು ನಾನು ಕೂಡಾ ಮನವಿ ಮಾಡಿದ್ದೇನೆ ಎಂದು ಶೆಟ್ಟರ್ ತಿಳಿಸಿದರು.
ಇನ್ನು ಕೇಂದ್ರ ಸರ್ಕಾರದಿಂದಲೂ ಸಹ ಹೆಚ್ಚಿನ ಪರಿಹಾರ ಸಿಗುವ ಭರವಸೆ ಇದೆ. ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡುವ ವಿಚಾರ ಇರಲಿ. ರಾಜ್ಯದ ನಿರಾಶ್ರಿತರಿಗೆ ಮೊದಲು ಸಹಾಯ ಮಾಡಬೇಕು. ನೆರೆಪೀಡಿತ ಪ್ರದೇಶಗಳಿಗೆ ಪ್ರಧಾನಿ ಮೋದಿ ಭೇಟಿ ನೀಡಿದರೆ ಒಳ್ಳೆಯದು. ಆದರೆ ನೆರೆಯ ಹೊಣೆ ಗೃಹ ಇಲಾಖೆಗೆ ಬರಲಿದೆ. ಗೃಹ ಸಚಿವರು ಈಗಾಗಲೇ ಭೇಟಿ ನೀಡಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿಳಿಸಿದರು.