ಬೆಂಗಳೂರು :ಲಾಲ್‌ಬಾಗ್, ಕಬ್ಬನ್ ಪಾರ್ಕ್ಗಳಿಗಿಂತ ದೊಡ್ಡ ಪಾರ್ಕ್ ನಿರ್ಮಾಣ ಮಾಡಲು ಸ್ಥಳ ಗುರುತಿಸುವಿಕೆ ಬಗ್ಗೆ ಇವತ್ತು ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದೇವೆ. ಸುಮಾರು 400 ಎಕರೆ ಜಾಗದ ಅವಶ್ಯಕತೆ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾರ್ಕ್ ನಿರ್ಮಾಣ ಗುರಿ ಹೊಂದಲಾಗಿದೆ. ಆ ಪಾರ್ಕ್ ಹೆಸರು ಅಟಲ್ ಬಿಹಾರಿ ವಾಜಪೇಯಿ ಉದ್ಯಾನವನ ಅಂತಾ ಹೆಸರಿಡಲು ನಿರ್ಧಾರ ಮಾಡಲಾಗಿದೆ ಎಂದು ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬನ್ನೇರುಘಟ್ಟ ಬೆಂಗಳೂರಿನ ಪೂರ್ವಕ್ಕೆ ಇದೆ. ಉತ್ತರಕ್ಕೆ ಒಂದು ಅಂತಾರಾಷ್ಟ್ರೀಯ ಮಟ್ಟದ ಪಾರ್ಕ್ ನಿರ್ಮಾಣ ಮಾಡುವ ಚಿಂತನೆ ಇದೆ. ಅದಕ್ಕಾಗಿ ಸ್ಥಳ ಗುರುತಿಸಲಾಗುತ್ತಿದೆ. ಜಾಗ ನಮ್ಮ ವಶಕ್ಕೆ ಬಂದ ನಂತರ ವೆಚ್ಚದ ಅಂದಾಜು ಗೊತ್ತಾಗುತ್ತದೆ. ಪ್ರಾಥಮಿಕ ವೆಚ್ಚಗಳಿಗೆ ಹತ್ತು ಕೋಟಿ ರೂ. ಇದೆ. ಡಿಪಿಆರ್ ನಂತರ ವೆಚ್ಚದ ನಿರ್ಧಾರ ಆಗುತ್ತದೆ. ಈ ಪಾರ್ಕ್ ನಿರ್ಮಾಣಕ್ಕೆ ಅನುದಾನದ ಕೊರತೆ ಆಗಲ್ಲ ಎಂದು ಹೇಳಿದರು.
ಮಳೆಯಿಂದ ತೋಟಗಾರಿಕೆ ಬೆಳೆ ಹಾನಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬೆಳೆ ವಿಮೆ ಮೇ 31ರವರೆಗೆ ಚಾಲ್ತಿಯಲ್ಲಿ ಇರಲಿದೆ. ಬೆಳೆ ವಿಮೆ ನೀಡಲು ನಮ್ಮ ಇಲಾಖೆ ಸಿದ್ಧವಿದೆ. ವಿಮೆ ಕಂಪನಿಗಳ ಜೊತೆ ನಾವು ಮಾತನಾಡ್ತೇವೆ. ಒಂದೊಂದು ಭಾಗದಲ್ಲಿ ಒಂದೊಂದು ರೀತಿ ಇದೆ. ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಮಾವು ಸೇರಿದಂತೆ ಶೇ.80ರಷ್ಟು ತೋಟಗಾರಿಕಾ ಬೆಳೆ ನಷ್ಟವಾಗಿದೆ. ಅದರ ವರದಿ ಬಂದ ನಂತರ ಪರಿಹಾರ ನೀಡುತ್ತೇವೆ. ಕಳೆದ ಬಾರಿಯ ಪರಿಹಾರವೂ ನೀಡಲಾಗಿದೆ. ಶೇ.98ರಷ್ಟು ಬೆಳೆ ವಿಮೆ ನೀಡಲಾಗಿದೆ ಎಂದರು.