ಕರ್ನಾಟಕ

karnataka

By

Published : Feb 1, 2022, 4:18 PM IST

Updated : Feb 1, 2022, 4:36 PM IST

ETV Bharat / city

ಪೋಷಕರು ಮಕ್ಕಳನ್ನು ಶಾಲೆಗೆ ಬಿಡಲೋದಾಗ ಮನೆಗೆ ಕನ್ನ ಹಾಕ್ತಿದ್ದ ಚಾಲಾಕಿ​.. ಬೆಂಗಳೂರಲ್ಲಿ 'ಪ್ರಾಜೆಕ್ಟ್​' ಕೋಡ್​ ವರ್ಡ್​ ಕಳ್ಳ ಅರೆಸ್ಟ್​ ​ ​

ಕಳ್ಳತನ ಕೃತ್ಯಕ್ಕೆ ಪ್ರಾಜೆಕ್ಟ್ ಎಂದು ಕೋಡ್ ವರ್ಡ್ ಬಳಸುತ್ತಿದ್ದರು. ಕದ್ದ ಚಿನ್ನಾಭರಣವನ್ನು‌ ಪರಿಚಯಸ್ಥ ಜ್ಯುವೆಲ್ಲರಿ‌ ಶಾಪ್​ಗಳಿಗೆ ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ಎಂದು‌ ನಗರ ಉತ್ತರ ವಿಭಾಗದ ಡಿಸಿಪಿ ವಸಂತ ವಿನಾಯಕ್ ಪಾಟೀಲ್ ತಿಳಿಸಿದ್ದಾರೆ. ಇದೀಗ ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ‌‌‌ ಒಪ್ಪಿಸಲಾಗಿದೆ‌.

thief-who-robbed
ಖತರ್ನಾಕ್​ ಕಳ್ಳ ಅಂದರ್​

ಬೆಂಗಳೂರು:ಮಕ್ಕಳನ್ನು ಶಾಲೆಗೆ ಬಿಡಲು ಹಾಗೂ ಕರೆತರಲು ಬೀಗ ಹಾಕಿಕೊಂಡು ಹೋಗುವ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಖತರ್ನಾಕ್​ ಕಳ್ಳತನ ಆರೋಪಿಯನ್ನು ಹೆಬ್ಬಾಳ ಹಾಗೂ ಆರ್.ಟಿ. ನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಅಲ್ಲದೇ, 51 ಲಕ್ಷ ಮೌಲ್ಯದ ಒಂದೂವರೆ ಕೆ.ಜಿ. ಮೌಲ್ಯದ ಚಿನ್ನ, ಬೆಳ್ಳಿಯನ್ನು ಜಪ್ತಿ ಮಾಡಲಾಗಿದೆ.

ಬೆಂಗಳೂರಲ್ಲಿ 'ಪ್ರಾಜೆಕ್ಟ್​' ಕೋಡ್​ ವರ್ಡ್​ ಕಳ್ಳ ಅರೆಸ್ಟ್​ ​ ​

ಮುರುಳಿ ಬಂಧಿತ ಆರೋಪಿ. ಹೆಬ್ಬಾಳ, ಅರ್.ಟಿ.ನಗರ ಹಾಗೂ ಡಿ.ಜಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 12 ವರ್ಷಗಳಿಂದ ಕಳ್ಳತನ ಮಾಡುತ್ತಿದ್ದರೂ ಸಣ್ಣ ಸುಳಿವು ನೀಡದೆ ಚಾಕಚಕ್ಯತೆ ಮೆರೆದಿದ್ದ. ಕಾವಲ್ ಬೈರಸಂದ್ರ ನಿವಾಸಿಯಾಗಿರುವ ಮುರುಳಿ ಆಲಿಯಾಸ್ ಪ್ರಾಜೆಕ್ಟ್ 7ನೇ ತರಗತಿ ವ್ಯಾಸಂಗ ಮಾಡಿದರೂ ಸಾಫ್ಟ್​ವೇರ್ ಇಂಜಿನಿಯರ್ ಎಂದು ಹೇಳಿಕೊಂಡು ಓಡಾಡುತ್ತಿದ್ದ. 2011ರಿಂದಲೂ‌ ನಡೆದ ಮನೆಗಳ್ಳತನ ಕೃತ್ಯಗಳಿಗೆ ಮಾಸ್ಟರ್ ಮೈಂಡ್ ಆಗಿದ್ದ.

ಬೀಗದ ಕೈಯನ್ನು ಕಣ್ಣಲ್ಲೇ ಅಳೆಯುತ್ತಿದ್ದ ಚಾಲಾಕಿ.. ಬೆಳಗ್ಗೆ ಮಕ್ಕಳನ್ನು ಶಾಲೆಗೆ ಬಿಡಲು ಹಾಗೂ ಸಂಜೆ ಕರೆತರಲು ಪೋಷಕರು ಶಾಲೆಗೆ ಹೋಗುವ ಅವಧಿಯಲ್ಲಿ ಬೀಗ ಹಾಕಿದ ಮನೆಗಳನ್ನೇ ಗುರುತಿಸಿಕೊಳ್ಳುತ್ತಿದ್ದ. ಮಹಿಳೆಯರು‌‌ ಬೀಗದ‌ ಕೀಯನ್ನು ಕೈಯಲ್ಲಿ ಇಟ್ಟುಕೊಳ್ಳುವುದು ಸಾಮಾನ್ಯ. ಈ ವೇಳೆ ಖದೀಮರು ದೂರದಿಂದಲೇ ಬೀಗದ‌ ಕೀ ಗಾತ್ರವನ್ನು‌ ಕಣ್ಣಲ್ಲೇ ಅಳತೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯಲ್ಲೇ ಬೀಗದ‌ ಕೀ ತಯಾರಿ..ಕಳ್ಳತನ ಮಾಡಲೆಂದೇ ಬೀಗ ತಯಾರಕರ ಬಳಿ ಕೀ ಮಾಡುವುದು ಹೇಗೆಂದು ನೋಡಿ ಕಲಿತುಕೊಂಡಿದ್ದ. ಕಳ್ಳತನ ಮಾಡುವ ಮನೆಯ ನಾಲ್ಕೈದು ನಕಲಿ ಕೀ ತಯಾರಿಸುತ್ತಿದ್ದ. ಬಳಿಕ ಅಂದುಕೊಂಡಂತೆ ಟಾರ್ಗೆಟ್ ಮಾಡಿದ ಮನೆಗಳಿಗೆ ಯಾರೂ ಇಲ್ಲದ ವೇಳೆ ಹೋಗಿ ಸುಲಭವಾಗಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ. ಹಲವು ವರ್ಷಗಳಿಂದ ಈ ರೀತಿಯ ಕಳ್ಳತನ ನಡೆಸಿ, ಪೊಲೀಸರಿಗೆ ಸಿಗದೆ ಚಳ್ಳೆಹಣ್ಣು ತಿನ್ನಿಸಿದ್ದ.

ಆಧಾರ್ ಕಾರ್ಡ್ ಮಾಡಿಸಿಕೊಂಡಿರಲಿಲ್ಲ..ಆರೋಪಿ ಮುರುಳಿ ಆರಂಭದಲ್ಲಿ ಪತ್ನಿಗೂ ತನ್ನ ಕೆಲಸದ ಬಗ್ಗೆ ಹೇಳಿರಲಿಲ್ಲ. ಪೊಲೀಸರಿಗೆ ಸಿಕ್ಕಿಬೀಳದಿರಲು ಆಧಾರ್ ಕಾರ್ಡ್ ಸಹ ಮಾಡಿಸಿಕೊಂಡಿರಲಿಲ್ಲ. ಆಧಾರ್ ಕಾರ್ಡ್ ಮಾಡಿಸಬೇಕಾದರೆ ಫಿಂಗರ್ ಪ್ರಿಂಟ್ ನೀಡಬೇಕು.‌ ಒಂದು ವೇಳೆ ಬೆರಳಚ್ಚು ನೀಡಿದರೆ ಪೊಲೀಸರು ತನಿಖೆ ನಡೆಸಿ ಬಂಧಿಸುತ್ತಾರೆ ಎಂಬ ಭೀತಿಯಿಂದ ಆಧಾರ್ ಕಾರ್ಡ್ ಮಾಡಿಸಿರಲಿಲ್ಲ ಎಂದು ತಿಳಿದುಬಂದಿದೆ.

ಕಳ್ಳತನ ಕೃತ್ಯಕ್ಕೆ ಪ್ರಾಜೆಕ್ಟ್ ಎಂದು ಕೋಡ್ ವರ್ಡ್ ಬಳಸುತ್ತಿದ್ದ. ಕದ್ದ ಚಿನ್ನಾಭರಣವನ್ನು‌ ಪರಿಚಯಸ್ಥ ಜ್ಯುವೆಲ್ಲರಿ‌ ಶಾಪ್​ಗಳಿಗೆ ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ಎಂದು‌ ನಗರ ಉತ್ತರ ವಿಭಾಗದ ಡಿಸಿಪಿ ವಸಂತ ವಿನಾಯಕ್ ಪಾಟೀಲ್ ತಿಳಿಸಿದ್ದಾರೆ. ಇದೀಗ ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ‌‌‌ ಒಪ್ಪಿಸಲಾಗಿದೆ‌.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Feb 1, 2022, 4:36 PM IST

ABOUT THE AUTHOR

...view details