ಬೆಂಗಳೂರು : ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಮುಂದಾಗಿರುವ ಸರ್ಕಾರ ಇದೀಗ ಆಡಳಿತದ ಶಕ್ತಿ ಕೇಂದ್ರ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಕೊರೊನಾ ಸೋಂಕು ಪತ್ತೆ ಹಚ್ಚಲು ಥರ್ಮಲ್ ಸ್ಕ್ರೀನಿಂಗ್ ನ್ನು ಇಂದಿನಿಂದ ಬಳಕೆ ಮಾಡಲಾಗುತ್ತಿದೆ.
ಕೋವಿಡ್ ತಡೆಗೆ ಆರೋಗ್ಯ ಇಲಾಖೆ ಕಟ್ಟೆಚ್ಚರ: ವಿಧಾನಸೌಧ, ವಿಕಾಸಸೌಧದಲ್ಲಿ ಥರ್ಮಲ್ ಸ್ಕ್ರೀನಿಂಗ್
ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಗಟ್ಟುವಲ್ಲಿ ಕಠಿಣ ಕ್ರಮಕೈಗೊಳ್ಳುತ್ತಿರುವ ಆರೋಗ್ಯ ಇಲಾಖೆ ಸದ್ಯ ವಿಧಾನಸಭೆ ಹಾಗೂ ವಿಧಾನ ಪರಿಷತ್ ಕಲಾಪಕ್ಕೆ ಆಗಮಿಸುತ್ತಿರುವ ಸಚಿವರು, ಶಾಸಕರು, ಅಧಿಕಾರಿಗಳು ಸೇರಿದಂತೆ ಎಲ್ಲರನ್ನು ಥರ್ಮಲ್ ಸ್ಕ್ರೀನಿಂಗ್ ಮೂಲಕ ತಪಾಸಣೆ ನಡೆಸುತ್ತಿದೆ. ಜೊತೆಗೆ ಸ್ಯಾನಿಟೈಜರ್ ಬಳಸುವಂತೆ ಮನವಿ ಮಾಡಲಾಯಿತು.
ಮುಂಜಾಗ್ರತಾ ಕ್ರಮವನ್ನು ಮತ್ತಷ್ಟು ಬಿಗಿಗೊಳಿಸಿರುವ ಆರೋಗ್ಯ ಇಲಾಖೆ ಕೊರೊನಾ ತಪಾಸಣೆ ಮಾಡಲು ಅನುಸರಿಸುತ್ತಿರುವ ಥರ್ಮಲ್ ಸ್ಕ್ರೀನಿಂಗ್ ಅನ್ನು ಮೆಟಲ್ ಟೆಸ್ಟರ್ ಮೂಲಕ ಸ್ಕ್ರೀನಿಂಗ್ ನಡೆಸಲು ಸೂಚನೆ ನೀಡಿತ್ತು. ಪ್ರಸ್ತುತ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದು, ಸಚಿವರು, ಶಾಸಕರು, ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ನೂರಾರು ಮಂದಿ ಆಗಮಿಸುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವಿಧಾನಸೌಧ ಪ್ರವೇಶ ಮಾಡುವವರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ.
ವಿಧಾನಸೌಧದ ನಾಲ್ಕು ದ್ವಾರಗಳಲ್ಲಿ ಸ್ಕ್ರೀನಿಂಗ್ ನಡೆಸುತ್ತಿದ್ದು, ಇಂದು ಸಾರ್ವಜನಿಕರು, ಸಿಬ್ಬಂದಿ, ಪತ್ರಕರ್ತರನ್ನೂ ಒಳಗೊಂಡಂತೆ ಎಲ್ಲರನ್ನೂ ತಪಾಸಣೆ ಮಾಡಲಾಯಿತು. ಇದರ ಜೊತೆಗೆ ಸಚಿವರು, ಶಾಸಕರು ಅಧಿಕಾರಿಗಳು ಸೇರಿದಂತೆ ವಿಧಾನಸಭೆ ಹಾಗೂ ವಿಧಾನಪರಿಷತ್ಗೆ ಆಗಮಿಸುವ ಎಲ್ಲರೂ ಸ್ಯಾನಿಟೈಜರ್ ಬಳಕೆ ಮಾಡಲು ಮನವಿ ಮಾಡಲಾಯಿತು.