ಬೆಂಗಳೂರು: ರವಿಗೆ ಕಾಣದ್ದು ಕವಿ ಕಂಡ ಅನ್ನುತ್ತೇವೆ. ಹಾಗೆ ಪೊಲೀಸ್ ಆಯುಕ್ತರಿಗೆ ಕಾಣದ್ದು ಬಿಜೆಪಿ ಎಂಎಲ್ಸಿ ರವಿಕುಮಾರ್ ಗೆ ಕಂಡಿದೆ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಲೇವಡಿ ಮಾಡಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಚಿವ ಹೆಚ್ ಎಂ ರೇವಣ್ಣ ಜೊತೆ ಜಂಟಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಯುವಕ ಚಂದ್ರು ಹತ್ಯೆ ಪ್ರಕರಣದಲ್ಲಿ ಬಿಜೆಪಿ ನಾಯಕರ ಹೇಳಿಕೆ ಸರಿಯಲ್ಲ ಎಂದು ಖಂಡಿಸಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯ ರವಿಕುಮಾರ್ ತಮ್ಮ ಮನಸ್ಸಿಗೆ ತೋಚಿದ ರೀತಿ ಹೇಳಿಕೆ ನೀಡುತ್ತಿದ್ದಾರೆ. ಗೃಹ ಸಚಿವರು ಮೊದಲಿಗೆ ಬೇರೆ ಹೇಳಿಕೆ ನೀಡಿದ್ದರು. ಬಳಿಕ ಚುಚ್ಚಿ ಚುಚ್ಚಿ ಕೊಂದಿದ್ದಾರೆಂದು ಹೇಳಿದ್ದರು. ನಂತರ ಆಕ್ಸಿಡೆಂಟ್ ನಿಂದ ಹತ್ಯೆ ಎಂಬ ಗೊಂದಲದ ಹೇಳಿಕೆ ಕೊಟ್ಟಿದ್ದರು. ಬಳಿಕ ಮೃತ ಚಂದ್ರು ಮನೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ರವಿಕುಮಾರ್ ಭೇಟಿ ನೀಡಿದ್ದು, ಆಗ ಈ ವಿವಾದಗಳು ಹುಟ್ಟಿಕೊಂಡಿವೆ ಎಂದು ಉಗ್ರಪ್ಪ ಆರೋಪಿಸಿದರು.
ಪೊಲೀಸ್ ಆಯುಕ್ತರ ಹೇಳಿಕೆ ಸುಳ್ಳು ಎಂದು ರವಿಕುಮಾರ್ ಆಯುಕ್ತರ ವಿರುದ್ಧ ಮಾತನಾಡಿದ್ದಾರೆ. ಹಾಗಾದ್ರೆ ಗೃಹ ಸಚಿವರು ನಾಲಾಯಕ್ಕಾ? ಅವರು ಬೇರೆ ಬೇರೆ ಹೇಳಿಕೆ ನೀಡುತ್ತಿದ್ದಾರೆ. ಗೃಹ ಸಚಿವರು ಸರಿಯಾದ ನಿಲುವು ತೆಗೆದುಕೊಳ್ಳುತ್ತಿಲ್ಲ. ಇಂತಹ ಗೃಹ ಸಚಿವರ ಅವಶ್ಯಕತೆ ರಾಜ್ಯಕ್ಕಿಲ್ಲ ಎಂದು ಹೇಳಿದ್ದಾರೆ. ಕೂಡಲೇ ಗೃಹ ಸಚಿವರನ್ನು ಕೆಳಗಿಳಿಸಬೇಕು. ತನಿಖೆ ಮಾಡುವವರು ಪೊಲೀಸರು. ಸಿ.ಟಿ. ರವಿ ಯಾವಾಗ ಪೊಲೀಸ್ ಆದರು. ರವಿಕುಮಾರ್ ಯಾವಾಗ ಪೊಲೀಸ್ ಆದರು ಎಂಬುದು ಗೊತ್ತಿಲ್ಲ. ಸಿ.ಟಿ.ರವಿ, ರವಿಕುಮಾರ್ ಅವರನ್ನು ಬಂಧಿಸಬೇಕು. ಇಲ್ಲಾ ಬಿಜೆಪಿ ನಿಲುವು ಸರಿಯಿದ್ದರೆ ಆಯುಕ್ತರದ್ದು ತಪ್ಪು. ಆಯುಕ್ತರು ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕು. ಜೆ ಜೆ ನಗರ ಠಾಣೆ ಪೊಲೀಸರ ವಿರುದ್ಧ ಕೇಸ್ ದಾಖಲಿಸಬೇಕಾಗುತ್ತದೆ ಎಂದು ಉಗ್ರಪ್ಪ ಕಿಡಿಕಾರಿದರು.