ಬೆಂಗಳೂರು:ರಾಜ್ಯದಲ್ಲಿ ನವೆಂಬರ್ ತಿಂಗಳ ಮಧ್ಯದಿಂದಲೇ ಹಿಂಗಾರು ಬೆಳೆಗಳ ಬಿತ್ತನೆಯಾಗಿದ್ದು, ಈ ಬೆಳೆಗಳಿಗೆ ನೀರಿನ ಕೊರತೆಯಾಗದಂತೆ ಕೃಷಿ ಪಂಪ್ಸೆಟ್ಗಳಿಗೆ ನಿತ್ಯ 7ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ.
ಜೋಳ ಹಾಗೂ ಕಡಲೆ ಹಿಂಗಾರಿನ ಪ್ರಮುಖ ಬೆಳೆಗಳಾಗಿವೆ. ಜೊತೆಗೆ ಇನ್ನೂ ಹಲವು ವಾಣಿಜ್ಯ ಬೆಳೆಗಳನ್ನು ಬಿತ್ತನೆ ಮಾಡಲಾಗುತ್ತದೆ. ಕೃಷಿ ಇಲಾಖೆಯ ಮಾಹಿತಿಯಂತೆ ರಾಜ್ಯದ 32 ಲಕ್ಷ ಹೆಕ್ಟೇರ್ ಪೈಕಿ 11.19ಲಕ್ಷ ಹೆಕ್ಟೇರ್ನಲ್ಲಿ ಕೃಷಿ ಭೂಮಿಯಲ್ಲಿ ಬಿತ್ತನೆ ಕಾರ್ಯ ನಡೆದಿದೆ.
ಇದನ್ನೂ ಓದಿ...ಐಪಿಎಸ್ ಅಧಿಕಾರಿಗಳ ನಡುವಿನ ರಂಪಾಟ ಈಗ ಐಎಎಸ್ ಅಧಿಕಾರಿ ಕಡೆಗೆ
ಕರ್ನಾಟಕ ವಿದ್ಯುತ್ ಸರಬರಾಜು ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಅಡಿ ಕಾರ್ಯನಿರ್ವಹಿಸುವ ಮೆಸ್ಕಾಂ, ಬೆಸ್ಕಾಂ, ಹೆಸ್ಕಾಂ, ಜೆಸ್ಕಾಂ ಹಾಗೂ ಸೆಸ್ಕಾಂಗಳ ಮೂಲಕ ರೈತರಿಗೆ ನಿಯಮಾನುಸಾರ ದಿನವೂ 7 ಗಂಟೆ ವಿದ್ಯುತ್ ಪೂರೈಸಲಾಗುತ್ತಿದೆ. ರೈತರ ಅಗತ್ಯಾನುಸಾರ ಕೆಲವೆಡೆ ಒಂದೆರಡು ತಾಸು ಹೆಚ್ಚುವರಿಯಾಗಿಯೂ ವಿದ್ಯುತ್ ಪೂರೈಸುತ್ತಿದ್ದೇವೆ ಎನ್ನುತ್ತಾರೆ ಕೆಪಿಟಿಸಿಎಸ್ನ ಹಿರಿಯ ಅಧಿಕಾರಿಗಳು.
ರಾಜ್ಯದ ರೈತರ ಕೃಷಿ ಪಂಪ್ಸೆಟ್ಗಳಿಗೆ ಬಹುತೇಕ ಹಗಲಲ್ಲೇ 7 ಗಂಟೆ ವಿದ್ಯುತ್ ಪೂರೈಸಲಾಗುತ್ತಿದೆ. ಆದರೆ, ಕೆಲವೆಡೆ ಹಗಲಲ್ಲಿಯೇ ನಿರಂತರ 7ಗಂಟೆ ವಿದ್ಯುತ್ ಪೂರೈಸಲು ಸಾಧ್ಯವಾಗದಂತ ಸಂದರ್ಭದಲ್ಲಿ ವಿಭಜಿಸಿ ನೀಡಲಾಗುತ್ತಿದೆ. ಹಗಲಲ್ಲಿ 4 ಗಂಟೆ, ರಾತ್ರಿ 3 ಗಂಟೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಹಾಗೆಯೇ ಕೆಲವೊಮ್ಮೆ ಅದನ್ನು ಬದಲಿಸಿ ಹಗಲು 3 ಗಂಟೆ, ರಾತ್ರಿ 4 ಗಂಟೆ ವಿದ್ಯುತ್ ಪೂರೈಸಲಾಗುತ್ತಿದೆ.
ಕೆಪಿಟಿಸಿಎಲ್ ಹಿರಿಯ ಅಧಿಕಾರಿಗಳ ಮಾಹಿತಿಯಂತೆ ರಾಜ್ಯದಲ್ಲಿ ವಿದ್ಯುತ್ಗೆ ಯಾವುದೇ ಕೊರತೆಯಿಲ್ಲ. ರಾಜ್ಯದ ಸೌರಶಕ್ತಿ, ಪವನಶಕ್ತಿ, ಕಲ್ಲಿದ್ದಲು ಹಾಗೂ ಜಲ ವಿದ್ಯುತ್ ಉತ್ಪಾದನಾ ಘಟಕಗಳಿಂದ ಹೆಚ್ಚಿನ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಗ್ರಿಡ್ ಮೂಲಕ ಪ್ರಸ್ತುತ ರಾಜ್ಯಕ್ಕೆ 11 ಸಾವಿರ ಮೆಗಾವ್ಯಾಟ್ ಲಭ್ಯವಾಗುತ್ತಿದ್ದು, ಅದರಲ್ಲಿ ಬಳಕೆಯಾಗುತ್ತಿರುವ 210 ಮಿಲಿಯನ್ ಯೂನಿಟ್ ವಿದ್ಯುತ್ನಲ್ಲಿ ಶೇ.48 ರಿಂದ 53ರಷ್ಟು ವಿದ್ಯುತ್ ಅನ್ನು ಗ್ರಾಮೀಣ ಪ್ರದೇಶಗಳಿಗೆ ಹಾಗೂ ಕೃಷಿ ಪಂಪ್ಸೆಟ್ಗಳಿಗೆ ಪೂರೈಕೆ ಮಾಡಲಾಗುತ್ತಿದೆ ಎನ್ನುತ್ತಾರೆ.