ಬೆಂಗಳೂರು: ಅವಧಿ ಪೂರ್ವ ಚುನಾವಣೆಯ ಯಾವುದೇ ಚರ್ಚೆ ಆಗಿಲ್ಲ, ಮುಂದಿನ ವರ್ಷವೇ ಚುನಾವಣೆ ನಡೆಯಲಿದೆ. 150ರ ಗುರಿಯ ಕಾರ್ಯಯೋಜನೆ ಅನುಷ್ಠಾನಕ್ಕೆ ಅಮಿತ್ ಶಾ ಮಾರ್ಗದರ್ಶನ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಕೋರ್ ಕಮಿಟಿ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ನಡೆದಿದೆ ಮುಂದಿನ ಚುನಾವಣೆಯ ಪೂರ್ವ ತಯಾರಿಗಳು ಸಂಘಟನಾತ್ಮಕ ಕಾರ್ಯಗಳ ಬಗ್ಗೆ ಚರ್ಚೆ ಆಗಿದೆ. ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಲು ಗುರಿ ಇರಿಸಿಕೊಂಡು ಅದಕ್ಕೆ ಬೇಕಾದ ಕಾರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸಲು ಬೇಕಾದ ಮಾರ್ಗದರ್ಶನ ಮಾಡಿದ್ದಾರೆ ಎಂದರು.
ಅವಧಿಪೂರ್ವ ಚುನಾವಣೆ ಇಲ್ಲ: ಯಾವುದೇ ರೀತಿಯ ಅವಧಿಪೂರ್ವ ಚುನಾವಣೆ ತಯಾರಿ ಕುರಿತು ಇಂದಿನ ಸಭೆಯಲ್ಲಿ ಚರ್ಚೆಗಳು ಆಗಿಲ್ಲ. ಅಂತಹ ಪ್ರಸ್ತಾಪವೂ ಇಲ್ಲ. ಕೇವಲ ಸಂಘಟನಾತ್ಮಕವಾಗಿ ಚರ್ಚೆ ನಡೆದಿದೆ. ಇದರ ಜೊತೆ ಜೊತೆಯಲ್ಲಿ ಮುಂದಿನ ಚುನಾವಣೆಯ ಬಗ್ಗೆಯೂ ಚರ್ಚೆ ಆಗಿದೆ ಎಂದರು.