ಬೆಂಗಳೂರು :ರಾಜ್ಯದಲ್ಲಿ ಅವಧಿಪೂರ್ಣ ಚುನಾವಣೆ ನಡೆಸುವ ಕುರಿತು ಪಕ್ಷದ ಮಟ್ಟದಲ್ಲಿ ಯಾವುದೇ ರೀತಿಯ ಚರ್ಚೆ ನಡೆದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುದ್ದಿಗಾರರೊಂದಿಗೆ ಮಾತನಾಡಿರುವುದು.. ಆರ್‌ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್ ಜೊತೆ ರಾಜ್ಯದಲ್ಲಿಯೂ ವಿಧಾನಸಭಾ ಚುನಾವಣೆ ನಡೆಸುವ ಆಲೋಚನೆ ನಡೆದಿದೆ ಎನ್ನುವುದನ್ನು ತಳ್ಳಿಹಾಕಿದರು. ಅವಧಿಪೂರ್ಣ ಚುನಾವಣೆ ಚರ್ಚೆ ಮಾಧ್ಯಮಗಳಲ್ಲಿ ನಡೀತಿದೆ. ನಮ್ಮ ಪಕ್ಷದಲ್ಲಿ ಅವಧಿಪೂರ್ವ ಚುನಾವಣೆ ಬಗ್ಗೆ ಚರ್ಚೆ ನಡೀತಿಲ್ಲ, ಯಾವುದೇ ಹಂತದಲ್ಲೂ, ಎಲ್ಲೂ ಕೂಡ ಪಕ್ಷದಲ್ಲಿ ಚರ್ಚೆ ನಡೆಯುತ್ತಿಲ್ಲ ಎಂದರು.
ವರಿಷ್ಠರು ಸೂಚನೆ ನೀಡಿದಾಗಿ ರಾಜ್ಯ ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ಮಾಡಲಾಗುತ್ತದೆ. ದೆಹಲಿಗೆ ಬರುವಂತೆ ವರಿಷ್ಠರು ಇನ್ನೂ ಸೂಚನೆ ಕೊಟ್ಟಿಲ್ಲ, ವರಿಷ್ಠರು ಸೂಚನೆ ಕೊಟ್ಟ ಮೇಲೆ ದೆಹಲಿಗೆ ಹೋಗುತ್ತೇನೆ. ವರಿಷ್ಠರು ಯಾವಾಗ ಹೇಳುತ್ತಾರೋ ಆಗ ಸಚಿವ ಸಂಪುಟ ಪುನಾರಚನೆ ಮಾಡಲಾಗುತ್ತದೆ ಎಂದರು.
ನಮ್ಮ ಪಕ್ಷ ಬಿಟ್ಟು ಯಾರೂ ಬೇರೆ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ಹಿಂದೆಯೂ ಅಂತಹ ಚಿಂತನೆ ಇರಲಿಲ್ಲ, ಈಗಲೂ ಇಲ್ಲ. ನಮ್ಮಿಂದ ಯಾರೂ ಹೋಗಲ್ಲ ಎನ್ನುವುದನ್ನು ನಿಖರವಾಗಿ ಹೇಳುತ್ತೇನೆ. ಆದರೆ, ಬೇರೆ ಪಕ್ಷದಿಂದ ಬರುವವರ ಬಗ್ಗೆ ಕಾದು ನೋಡಿ ಎಂದು ಕಾಂಗ್ರೆಸ್, ಜೆಡಿಎಸ್ನಿಂದ ಬರುವವರ ಬಗ್ಗೆ ಸುಳಿವು ಕೊಟ್ಟರು.
ರಾಜ್ಯ ಪ್ರವಾಸ ಮಾಡುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಇದೇ ತಿಂಗಳ 30, 31ರಂದು ರಾಜ್ಯ ಬಿಜೆಪಿಯ ಕಾರ್ಯಕಾರಿಣಿ ಸಭೆ ಇದೆ. ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯ ಪ್ರವಾಸ ಸೇರಿ ಎಲ್ಲ ವಿಚಾರಗಳು ಚರ್ಚೆ ಆಗುತ್ತವೆ ಎಂದರು.
ಉಕ್ರೇನ್ನಿಂದ ನವೀನ್ ಅವರ ದೇಹ ತರುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಉಕ್ರೇನ್ನಲ್ಲಿ ಬಾಂಬಿಂಗ್ ಇನ್ನೂ ನಡೀತಿದೆ. ದಾಳಿ ನಿಂತ ನಂತರ ಮೃತದೇಹ ತರುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ. ಸದ್ಯ ಉಕ್ರೇನ್ನಲ್ಲಿರುವ ಭಾರತೀಯರ ಸ್ಥಳಾಂತರ ಅಂತಿಮ ಹಂತಕ್ಕೆ ಬಂದಿದೆ. ಉಕ್ರೇನ್ನಲ್ಲಿ ಉಳಿದವರಿಗೂ ಬೇರೆ ಬೇರೆ ರೀತಿಯಲ್ಲಿ ಸಹಾಯ ಮಾಡಲು ಭಾರತ ಮುಂದಾಗಿದೆ ಎಂದರು.