ಬೆಂಗಳೂರು: 73ನೇ ಗಣರಾಜ್ಯೋತ್ಸವ ಹಿನ್ನೆಲೆ ಜೆಡಿಎಸ್ ಪಕ್ಷ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಾಮಾಣಿಕ ಚುನಾವಣೆಗಳು ನಡೆಯಬೇಕು.
ಆದರೆ, ಪ್ರಾಮಾಣಿಕ ಚುನಾವಣೆಗಳು ನಡೆಯುತ್ತಿಲ್ಲ. ಚುನಾವಣೆ ಸಂದರ್ಭ ಕೊಡುವ ಭರವಸೆಗಳು ಈಡೇರುತ್ತಿಲ್ಲ. ಆಸೆ, ಅಮಿಷಗಳನ್ನು ಘೋಷಣೆ ಮಾಡಲಾಗುತ್ತಿದೆ. ಬಡವರ ತೆರಿಗೆ ಹಣವನ್ನ ಪೋಲು ಮಾಡಲಾಗ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹಿರಿಯರು ತಂದ ವ್ಯವಸ್ಥೆ ಯಶಸ್ವಿಗೊಳಿಸಬೇಕು. ಆದರೆ, ನಿರೀಕ್ಷೆಗೆ ತಕ್ಕಂತೆ ಅದು ಸಾಧ್ಯವಾಗಿಲ್ಲ. ಕೋವಿಡ್ನಿಂದ ಸಮಾಜ ಸಂಕಷ್ಟಕ್ಕೊಳಗಾಗಿದೆ. ಆದ್ರೆ, ಸರ್ಕಾರ ಪ್ರಮಾಣಿಕ ಪ್ರಯತ್ನಗಳನ್ನು ಮಾಡುತ್ತಿಲ್ಲ. ದೇಶದಲ್ಲಿ 4.40 ಕೋಟಿ ಶ್ರಮಿಕರು ಕುಗ್ಗಿ ಹೋಗಿದ್ದಾರೆ. ಬಡವರು, ಶ್ರಮಿಕರ ಜೀವ ಉಳಿಸಬೇಕಿದೆ ಎಂದರು.
ಇಂದು ಗಣರಾಜ್ಯೋತ್ಸವ ಆಚರಣೆ ಮಾಡುತ್ತಿದ್ದೇವೆ. ದೇಶದ ಜನರ ಬದುಕನ್ನು ಎತ್ತಿ ಹಿಡಿಯಬೇಕಿದೆ. ಪ್ರಗತಿಯನ್ನು ಸಾಧಿಸುವಲ್ಲಿ ಸರ್ಕಾರ ಇನ್ನೂ ಸಫಲವಾಗಿಲ್ಲ. ನಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಬೇಕಿದೆ ಎಂದರು.
ನಮ್ಮ ಪಕ್ಷಕ್ಕೂ ಬಿಜೆಪಿ, ಕಾಂಗ್ರೆಸ್ನಿಂದ ಅರ್ಜಿ ಹಾಕಿಕೊಂಡಿದ್ದಾರೆ. ಆದರೆ, ನಮ್ಮೊಟ್ಟಿಗೆ ಬರುವವರು ಸಣ್ಣ ಸಣ್ಣ ಮುಖಂಡರು. ಎರಡು ರಾಷ್ಟ್ರೀಯ ಪಕ್ಷಗಳ ನಾಯಕರು ಬೇರೆ ಪಕ್ಷಗಳಿಂದ ವಲಸೆ ಬರಲಿದ್ದಾರೆ ಎಂದು ಹೇಳ್ತಿದ್ದಾರೆ. ಪಟ್ಟಿಯನ್ನು ಇಟ್ಕೊಂಡಿದ್ದೇವೆ ಎಂದು ಡಿಕೆಶಿ, ಸಿದ್ದರಾಮಯ್ಯ ಬಹಿರಂಗ ಹೇಳಿಕೆ ನೀಡ್ತಿದ್ದಾರೆ.
ಜೆಡಿಎಸ್ನಿಂದ ಶಾಸಕರು ಬರುತ್ತಿದ್ದಾರೆ ಎಂದಿದ್ದಾರೆ. ಬಿಜೆಪಿಯವರು ಕಾಂಗ್ರೆಸ್ ಶಾಸಕರು ಬರುತ್ತಾರೆ ಎನ್ನುತ್ತಿದ್ದಾರೆ. ಜೆಡಿಎಸ್-ಬಿಜೆಪಿ ಬಾಲಂಗೋಚಿ ಅಂದಿದ್ದಾರೆ. ತುಮಕೂರಿನಿಂದ ಜೆಡಿಎಸ್ ಒದ್ದು ಓಡಿಸಿ ಎಂದಿದ್ದಾರೆ. ಕಾಂಗ್ರೆಸ್, ಬಿಜೆಪಿ ಇಬ್ಬರಿಗೂ ನಾನು ಕೇಳುವುದಿಷ್ಟೇ, ಯಾರ್ಯಾರು ಇದ್ದಾರೆ ಅನ್ನೋದನ್ನು ಹೇಳಲಿ. ಯಾರು ಹೋಗಬಹುದೆಂಬ ಮಾಹಿತಿ ನಮಗೂ ಗೊತ್ತಿದೆ. ಅದರಿಂದ ನನಗೇನು ಗಾಬರಿಯಿಲ್ಲ ಎಂದು ತಿಳಿಸಿದರು.