ಬೆಂಗಳೂರು: ಕೇಂದ್ರ ಸರ್ಕಾರದ ಬಜೆಟ್ ಅನ್ನು ರಾಜ್ಯ ಸರ್ಕಾರ ಸ್ವಾಗತಿಸಿದೆ. ಈ ಬಾರಿಯ ಕೇಂದ್ರ ಬಜೆಟ್ ದೇಶದ ಸಮಗ್ರ ಅಭಿವೃದ್ಧಿಗೆ ಪೂರಕ ಎನಿಸಲಿದ್ದು, ಮೂಲಭೂತ ಸೌಕರ್ಯಕ್ಕೆ ಹೆಚ್ಚು ಬಂಡವಾಳ ಹೂಡುವ ಕಾರಣ ಸರಕು ಸೇವಾ ಕ್ಷೇತ್ರ, ಆರೋಗ್ಯ ಸೇರಿದಂತೆ ವಿವಿಧ ರಂಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಸಿಎಂ ಕಚೇರಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.
ಸಿಎಂ ಕಚೇರಿ ಪತ್ರಿಕಾ ಹೇಳಿಕೆ ಇದೊಂದು ಐತಿಹಾಸಿಕ ಬಜೆಟ್. ಕೃಷಿ ಉತ್ಪಾದನೆ ಪ್ರಮಾಣ ಹೆಚ್ಚಳ, ಮೂಲಸೌಕರ್ಯ ಹೆಚ್ಚಳ, ಆರೋಗ್ಯ ಕ್ಷೇತ್ರದಲ್ಲಿ ಸೌಕರ್ಯ ವೃದ್ಧಿಗೆ ಇದು ಪೂರಕವಾಗಲಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯೂ (ಐಎಂಎಫ್) ಭಾರತವು ಅತಿ ವೇಗದಿಂದ ಅಭಿವೃದ್ಧಿ ಸಾಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದೆ. ಇದೇ ಕಾರಣಕ್ಕೆ ಮೂಲಸೌಕರ್ಯಕ್ಕೆ ಗರಿಷ್ಠ ಒತ್ತು ನೀಡಲಾಗಿದೆ. ಕೃಷಿ ಮೂಲಸೌಕರ್ಯಕ್ಕೆ 1 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಲಾಗುವುದು. ವಿವಿಧ ಕ್ಷೇತ್ರಗಳ ಮೂಲಸೌಕರ್ಯ ವೃದ್ಧಿಗೆ ಒಟ್ಟಾಗಿ ಮುಂದಿನ 5 ವರ್ಷಗಳಲ್ಲಿ 100 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಲಾಗುವುದು ಎಂದು ಮಾಹಿತಿ ನೀಡಲಾಗಿದೆ.
ಭಾರತ, ಜಗತ್ತಿನ ಆರೋಗ್ಯದ ಕೇಂದ್ರ (ಹಬ್) ಆಗುವತ್ತಾ ಮುನ್ನಡೆಯಲಿದೆ. ಕಳೆದ ಸಾಲಿನ 94 ಸಾವಿರ ಕೋಟಿ ರೂ. ಬದಲು ಈ ಬಾರಿ ಈ ಕ್ಷೇತ್ರದ ಹೂಡಿಕೆಯನ್ನು 2,23,000 ಕೋಟಿಗೆ ಏರಿಸಲಾಗಿದೆ. ಇದರಿಂದಾಗಿ ಬೃಹತ್ ಆರೋಗ್ಯ ಮೂಲಸೌಕರ್ಯ ಕೇಂದ್ರವಾಗಿ ಭಾರತವು ಬೆಳೆಯಲಿದೆ.
2021-22ನೇ ಸಾಲಿನ ಕೇಂದ್ರ ಬಜೆಟ್‌ನಡಿ ಕೇಂದ್ರ ಸರ್ಕಾರವು 34,83,236 ಕೋಟಿ ರೂಪಾಯಿಗಳನ್ನು ವಿವಿಧ ಕ್ಷೇತ್ರಗಳಡಿ ವ್ಯಯಿಸಲು ಉದ್ದೇಶಿಸಿದೆ. ವಿತ್ತೀಯ ಕೊರತೆ ಕಳೆದ ಬಾರಿ ಶೇಕಡಾ 46 ರಷ್ಟಿದ್ದು, ಈ ಬಾರಿ ಶೇಕಡ 6.8 ರಷ್ಟು ಇದ್ದರೂ, ಮೂಲಭೂತ ಸೌಕರ್ಯಕ್ಕೆ ಹೆಚ್ಚು ಬಂಡವಾಳ ಹೂಡುವ ಕಾರಣ ಸರಕು ಸೇವಾ ಕ್ಷೇತ್ರ, ಆರೋಗ್ಯ ಸೇರಿದಂತೆ ವಿವಿಧ ರಂಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಯಾಗಲಿವೆ. ಇದು ದೇಶದ ಸಮಗ್ರ ಅಭಿವೃದ್ಧಿಗೆ ಪೂರಕ ಎನಿಸಲಿದ್ದು, ಈ ಬಜೆಟ್ ಅನ್ನು ಸ್ವಾಗತಿಸುತ್ತೇವೆ ಎಂದು ಸಿಎಂ ಕಚೇರಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.
ರಾಜ್ಯಕ್ಕೆ ಸಿಕ್ಕ ಅನುದಾನದ ಮಾಹಿತಿ ಹಂಚಿಕೊಂಡ ಸಿಎಂ ಕಚೇರಿ:
- 33 ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಅಡಿಗಲ್ಲು ಹಾಕಲು 10,904 ಕೋಟಿ ಬಿಡುಗಡೆ.
- 2021-22ರಲ್ಲಿ ಕರ್ನಾಟಕದಲ್ಲಿ 1,16,144 ಕೋಟಿ ರೂ. ಮೂಲ ಸೌಕರ್ಯ ವ್ಯವಸ್ಥೆ ನಿರ್ಮಾಣ.
- 2ನೇ ಹಂತದ ಬೆಂಗಳೂರು ಮೆಟ್ರೋ ನಿರ್ಮಾಣ ಕಾಮಗಾರಿಗೆ 14,788 ಕೋಟಿ ರೂ. ಬಿಡುಗಡೆ.
- ಬೆಂಗಳೂರು ಉಪನಗರ ಯೋಜನೆಗೆ 23,093 ಕೋಟಿ ರೂ ಬಿಡುಗಡೆ.
- ಕರ್ನಾಟಕದಲ್ಲಿ ರೈಲ್ವೆ ಯೋಜನೆಗಳಿಗೆ 4,870 ಕೋಟಿ ರೂಪಾಯಿ ಅನುದಾನ.
- ತುಮಕೂರು 7,725 ಕೋಟಿ ರೂ. ವೆಚ್ಚದಲ್ಲಿ ಕೈಗಾರಿಕಾ ಕಾರಿಡಾರ್ (ಸಣ್ಣಸಣ್ಣ ಕೇಂದ್ರಗಳ) ನಿರ್ಮಾಣ. ಈ ಮೂಲಕ 2.8 ಲಕ್ಷ ಉದ್ಯೋಗಾವಕಾಶ ಲಭಿಸಲಿದೆ.
- ಅಮೆರಿಕದ ಸಂಸ್ಥೆಯಾದ ಟೆಸ್ಸಾವು ಎಲೆಕ್ಟಿಕಲ್ ಕಾರು ಉತ್ಪಾದನಾ ಘಟಕವನ್ನು ಕರ್ನಾಟಕದಲ್ಲಿ ತೆರೆಯಲಿದೆ.
- ಕೊಚ್ಚಿ-ಮಂಗಳೂರು ಗ್ಯಾಸ್ ಪೈಪ್‌ಲೈನ್ ಲೋಕಾರ್ಪಣೆ (ಜನವರಿ 2021). ಉತ್ತರ ಕರ್ನಾಟಕದ ಭಾಗದಲ್ಲಿ 21,000 ಕೋಟಿ ರೂ. ವೆಚ್ಚದಲ್ಲಿ 13 ಹೆದ್ದಾರಿ ನಿರ್ಮಾಣದ ಯೋಜನೆಗೆ ಅಸ್ತು.
- ಬೆಂಗಳೂರು- ಮಂಗಳೂರಿಗೆ ಸಂಪರ್ಕ ಕೊಂಡಿಯಾಗಿರುವ ಶಿರಾಡಿಯ ಸುರಂಗ ಮಾರ್ಗ ನಿರ್ಮಾಣಕ್ಕೆ ಅನುಮೋದನೆ. ಒಟ್ಟು 13 ಕಿಮೀ ಉದ್ದದ 6 ಸುರಂಗ ಮಾರ್ಗ, 1.5 ಕಿ.ಮೀ ಉದ್ದದ 10 ಸೇತುವೆಗಳ ನಿರ್ಮಾಣಕ್ಕೆ 10,000 ಕೋಟಿ ಬಿಡುಗಡೆ.