ಬೆಂಗಳೂರು :ರಾಜ್ಯ ರಾಜಕಾರಣದಲ್ಲಿ ನಡೆದ ಹಲವು ವಿದ್ಯಮಾನಗಳ ನಡುವೆ ಅಧಿಕಾರದ ಚುಕ್ಕಾಣೆ ಹಿಡಿದ ಬಿಜೆಪಿ ಸರ್ಕಾರ ಒಂದು ವರ್ಷ ಪೂರ್ಣಗೊಳಿಸುತ್ತಿದೆ. ಇಂತಹ ಏಳು-ಬೀಳುಗಳ ನಡುವೆ ಇದೀಗ ಬಿಜೆಪಿ ಸರ್ಕಾರ ಮಹಾಮಾರಿ ಕೋವಿಡ್-19 ಎದುರಿಸುತ್ತಿದೆ. ಕೊರೊನಾ ಆರ್ಭಟದಿಂದ ಆರ್ಥಿಕ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಸಿಲುಕಿದ್ದರೂ ಲಾಕ್ಡೌನ್ ವೇಳೆ ಹಲವಾರು ವರ್ಗಕ್ಕೆ ಆರ್ಥಿಕ ನೆರವು ನೀಡುವ ಮೂಲಕ ದಿಟ್ಟತನ ಪ್ರದರ್ಶಿಸಿದೆ.
ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಕಾರ್ಮಿಕ, ಶ್ರಮಿಕ ವರ್ಗ, ಹೂ ಬೆಳೆಗಾರರು, ರೈತರು, ಉದ್ಯಮಿಗಳು, ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಸೇರಿ ಇತರ ವರ್ಗದವರಿಗೆ ಸರ್ಕಾರ ಒಟ್ಟು ₹2,272 ಕೋಟಿ ಮೊತ್ತದ ವಿಶೇಷ ಪ್ಯಾಕೇಜ್ ಘೋಷಿಸಿದ್ದರಿಂದ ಲಕ್ಷಾಂತರ ಕುಟುಂಬಗಳಿಗೆ ನೆರವಾಗಿದೆ. ಮೂರು ಹಂತದಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿದ ಸರ್ಕಾರ, ಮೊದಲ ಹಂತದಲ್ಲಿ ₹1,610 ಕೋಟಿ, ಎರಡನೇ ಹಂತದಲ್ಲಿ ₹162 ಕೋಟಿ ಮತ್ತು 3ನೇ ಹಂತದಲ್ಲಿ ₹500 ಕೋಟಿ ನೆರವನ್ನು ಪ್ರಕಟಿಸಿತ್ತು.
ಈ ಹಿಂದೆ ಲಾಕ್ಡೌನ್ ಮಾಡಿದ ಪರಿಣಾಮ ರಾಜ್ಯದ ಅಂದಾಜು 11,687 ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆದಿರುವ ಹೂವುಗಳು ಮಾರಾಟವಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಅವರಿಗೆ ನೆರವಾಗಲು ಹೆಕ್ಟೇರ್‌ಗೆ ₹25 ಸಾವಿರ ಪರಿಹಾರ ನೀಡಲಾಗುತ್ತಿದೆ. ಒಟ್ಟು ₹1,610 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿದ್ದು, ಇದರಿಂದ ಸುಮಾರು 27 ಲಕ್ಷಕ್ಕೂ ಹೆಚ್ಚು ಬೆಳೆಗಾರರಿಗೆ ಪ್ರಯೋಜನವಾಗಲಿದೆ. ಕೆಲಸವಿಲ್ಲದೆ ದೈನಂದಿನ ಆದಾಯ ಕಳೆದುಕೊಂಡಿರುವ ಕಟ್ಟಡ ಕಾರ್ಮಿಕರು, ಮಡಿವಾಳರು, ಕ್ಷೌರಿಕರು, ಆಟೋ-ಟ್ಯಾಕ್ಸಿ ಚಾಲಕರಿಗೆ ಒಂದು ಬಾರಿ ತಲಾ ₹5 ಸಾವಿರ ನೆರವು ನೀಡಿದೆ. ರಾಜ್ಯದ ಆರ್ಥಿಕ ಸಂಕಷ್ಟದ ನಡುವೆಯೂ ಪರಿಹಾರದ ಮೊತ್ತವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಿದೆ.
ರಾಜ್ಯದ 60 ಸಾವಿರ ಅಗಸರು, 2.3 ಲಕ್ಷ ಕ್ಷೌರಿಕರು, 7.75 ಲಕ್ಷ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಒಂದು ಬಾರಿಯ ಪರಿಹಾರವಾಗಿ ತಲಾ ₹5,000 ಘೋಷಣೆ ಮಾಡಲಾಗಿದೆ. ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದ ಅಸಂಘಟಿತ ವಲಯದ ಕಾರ್ಮಿಕರು, ರೈತರು, ಸಣ್ಣ ಉದ್ಯಮಿಗಳಿಗೆ ನೆರವು ನೀಡುವ ಮೂಲಕ ಎಲ್ಲಾ ವರ್ಗದವರ ಹಿತ ಕಾಯಲು ಮುಂದಾಗಿದೆ. ಕಟ್ಟಡ ಕಾರ್ಮಿಕರಿಗೆ ಈಗಾಗಲೇ ₹2,000 ಪರಿಹಾರ ನೀಡಲಾಗಿತ್ತು. ಇದಕ್ಕೆ ಹೆಚ್ಚುವರಿಯಾಗಿ ₹3,000 ಸೇರಿ ಒಟ್ಟು ₹5,000 ನೀಡಲಾಗುತ್ತಿದೆ. 15.8 ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರ ಪೈಕಿ 11.8 ಲಕ್ಷ ಮಂದಿಯ ಬ್ಯಾಂಕ್ ಖಾತೆಗೆ ಈಗಾಗಲೇ ತಲಾ ₹2,000 ಜಮೆ ಮಾಡಲಾಗಿದೆ. ಉಳಿದ 4 ಲಕ್ಷ ಕಾರ್ಮಿಕರಿಗೆ ಶೀಘ್ರ ಹಣ ಒದಗಿಸಲು ಸರ್ಕಾರ ಕ್ರಮ ಕೈಗೊಂಡಿದೆ.