ಕರ್ನಾಟಕ

karnataka

ETV Bharat / city

ಶಿವಮೊಗ್ಗ ಸ್ಫೋಟ ಪ್ರಕರಣ ಕಂದಾಯ ಆಯುಕ್ತರಿಂದ ತನಿಖೆ ಎಂದ ಸರ್ಕಾರ: ಸಭಾತ್ಯಾಗ ಮಾಡಿದ ಕಾಂಗ್ರೆಸ್​ - The Shimoga blast case is being investigated by the Revenue Commissioner

ಜ.21 ರಂದು ಶಿವಮೊಗ್ಗದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣವನ್ನು ಕಂದಾಯ ಆಯುಕ್ತರಿಂದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಭೂ ಮಾಲೀಕರು, ಕ್ವಾರಿ ಲೀಸ್ ಹೋಲ್ಡರ್ ಹಾಗೂ ಸ್ಫೋಟಕ ಸರಬರಾಜುದಾರರ ಮಧ್ಯೆ ಯಾವುದಾದರೂ ರಾಜಕೀಯ ವ್ಯಕ್ತಿಗಳು ಸಂಬಂಧ ಹೊಂದಿದ್ದರೆ ಅವರ ವಿರುದ್ಧವೂ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.

ಸ್ಫೋಟ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಬಸವರಾಜ್ ಬೊಮ್ಮಾಯಿ
ಸ್ಫೋಟ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಬಸವರಾಜ್ ಬೊಮ್ಮಾಯಿ

By

Published : Feb 1, 2021, 7:20 PM IST

ಬೆಂಗಳೂರು: ಶಿವಮೊಗ್ಗ ಸ್ಫೋಟ ಪ್ರಕರಣವನ್ನು ಕಂದಾಯ ಆಯುಕ್ತರಿಂದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.

ಸ್ಫೋಟ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಬಸವರಾಜ್ ಬೊಮ್ಮಾಯಿ

ವಿಧಾನಸಭೆಯಲ್ಲಿ ಪ್ರತಿಕ್ರಿಯಿಸಿದ ಅವರು, ಜ.21 ರ ರಾತ್ರಿ ಶಿವಮೊಗ್ಗದಲ್ಲಿ ಸ್ಫೋಟ ಆಗಿದೆ. ಸರ್ವೆ ನಂ.2ರ ಈ ಪ್ರದೇಶ ಕುಲಕರ್ಣಿ ಎಂಬ ಮಾಲೀಕರಿಗೆ ಸೇರಿದೆ. ಅವರು ಈ ಕ್ರಷರ್ ಅನ್ನು ಲೀಸ್ ಆಧಾರದಲ್ಲಿ ಸುಧಾಕರ್ ಎಂಬವರಿಗೆ ಕೊಟ್ಟಿದ್ದಾರೆ. 25-3-2019 ರಂದು ಕ್ರಷರ್​ಗೆ ಪರವಾನಗಿ ಕೊಡಲಾಗಿದೆ. ಸುಧಾಕರ್​ಗೆ ಎಂಟು ವರ್ಷಕ್ಕೆ ಲೀಸ್ ಕೊಡಲಾಗಿತ್ತು. ಇದು ಪರಿಸರ ಸೂಕ್ಷ್ಮ ಪ್ರದೇಶವಾಗಿದೆ. 10 ಕಿ.ಮೀ ಬಫರ್ ಝೋನ್​ ವ್ಯಾಪ್ತಿಯಲ್ಲಿ ಬರಲಿದೆ. ಕ್ರಷರ್ ಗಳಿಗೆ ಅನುಮತಿ ಕೊಡಬಹುದು ಎಂಬ ನಿಯಮ ಇದ್ದರೂ ಸಹ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.

ಈ ಜಮೀನು ಮಾಲೀಕರ ವಿರುದ್ಧ ಅಕ್ರಮ ಗಣಿಗಾರಿಕೆ ಮಾಡಿರುವ ಹಿನ್ನೆಲೆ ಮೂರು ಪ್ರಕರಣಗಳು ದಾಖಲಾಗಿವೆ. 2018ರಲ್ಲಿ ಮೊದಲ ಪ್ರಕರಣ ದಾಖಲಾಗಿದೆ. ಕುಲಕರ್ಣಿ ಮೇಲೆ ಮೂರನೇ ಜೆಎಂಎಫ್​ಸಿ ನ್ಯಾಯಾಲಯದಲ್ಲಿ 2018 ರಲ್ಲಿ ಕೇಸ್ ದಾಖಲಾಗಿದೆ. ಬಳಿಕ 2019 ರಲ್ಲಿ ಮತ್ತೊಂದು ಕೇಸ್ ಆಗಿತ್ತು. ಬಳಿಕ ಅವರಿಗೆ ಕ್ರಷಿಂಗ್ ಪರವಾನಗಿ ನೀಡಲಾಗಿದೆ. ಅಕ್ರಮ ನಡೆಯುತ್ತಿದ್ದರೂ ಆವತ್ತಿನ ಡಿಸಿಗಳು, ಗಣಿಗಾರಿಕೆ ಇಲಾಖೆ ಅಧಿಕಾರಿಗಳು ಕ್ರಷರ್​ಗೆ ಪರವಾನಗಿ ನೀಡಿದ್ದಾರೆ. ಆವತ್ತು ಅಕ್ರಮ ಗಣಿಗಾರಿಕೆ ನಡೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅದೇ ಸ್ಥಳದಲ್ಲಿ ಇಂದು ಸ್ಫೋಟ ಆಗಿದೆ ಎಂದು ಟಾಂಗ್ ನೀಡಿದರು.

ಸ್ಫೋಟಕಗಳು ಆಂಧ್ರದಿಂದ ಬರುತ್ತದೆ. ಅವರು ನಿಯಮವನ್ನು ಅನುಸರಿಸಿಲ್ಲ. 20 ವರ್ಷದಿಂದ ಇಲ್ಲಿ ಅಕ್ರಮ ಗಣಿಗಾರಿಕೆ ಮಾಡಲಾಗುತ್ತಿದೆ. ಸುಮಾರು 8 ಕೋಟಿ ರೂ. ದಂಡ ಹಾಕಿದ್ದೇವೆ. ಆದರೂ ಅಕ್ರಮಕ್ಕೆ ಯಾವುದೇ ನಿಯಂತ್ರಣ ಆಗಿಲ್ಲ. ಅಧಿಕಾರಿಗಳು ಎಷ್ಟು ಬಿಗಿ ಕ್ರಮ ಕೈಗೊಳ್ಳಲು ಯತ್ನಿಸಿದರೂ ಅದನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ ಎಂಬುದಕ್ಕೆ ಈ ಸ್ಫೋಟ ಸಾಕ್ಷಿಯಾಗಿದೆ ಎಂದು ವಿವರಿಸಿದರು.

ಭೂ ಮಾಲೀಕರು, ಕ್ವಾರಿ ಲೀಸ್ ಹೋಲ್ಡರ್ ಹಾಗೂ ಸ್ಫೋಟಕ ಸರಬರಾಜುದಾರರ ಮಧ್ಯೆ ಯಾವುದಾದರೂ ರಾಜಕೀಯ ವ್ಯಕ್ತಿಗಳು ಸಂಬಂಧ ಹೊಂದಿದ್ದರೆ ಅವರ ವಿರುದ್ಧವೂ ನಾವು ಕ್ರಮ ಕೈಗೊಳ್ಳುತ್ತೇವೆ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಸ್ಫೋಟಕದ ಮೂಲ ಸರಬರಾಜುದಾರರನ್ನು ಬಂಧಿಸಲು ಆಂಧ್ರ ಪೊಲೀಸರ ಸಹಕಾರ ಪಡೆಯಲಾಗುತ್ತಿದೆ. ಅನಂತಪುರದಲ್ಲಿ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆತನನ್ನು ಬಂಧಿಸಲಾಗುವುದು‌ ಎಂದು ತಿಳಿಸಿದರು.

ಬಿಡದಿಯಲ್ಲಿ 13,600 ಜಿಲೆಟಿನ್ ಸ್ಟಿಕ್ ಪತ್ತೆಯಾಗಿದೆ. ಸುಮಾರು 17,000 ಜಿಲೆಟಿನ್ ಸ್ಟಿಕ್ಸ್ 10 ತಿಂಗಳ ಕಾರ್ಯಾಚರಣೆಯಲ್ಲಿ ಪತ್ತೆಯಾಗಿದೆ‌. ಇದು ರಾಜ್ಯದಲ್ಲಿ ನಡೆಯುತ್ತಿರುವ ಅವ್ಯವಹಾರವಾಗಿದೆ. ರಾಜಕೀಯ ಮೈತ್ರಿ ಸಂಬಂಧವೂ ತನಿಖೆ ಮಾಡಿ ಕ್ರಮ ಕೈಗೊಳ್ಳಲಾಗುತ್ತದೆ. ಡಿಸಿಗಳು ಕ್ರಮ ಕೈಗೊಳ್ಳದಿರುವ ಬಗ್ಗೆಯೂ ಮಾಹಿತಿ ಪಡೆಯುತ್ತೇವೆ. ಡಿಸಿಯವರು ಒಂದು ಸಭೆಯಲ್ಲಿ ಸದ್ಯಕ್ಕೆ ಪರವಾನಗಿ ಕೊಡುವುದು ಬೇಡ. ಅಕ್ರಮ ಗಣಿಗಾರಿಕೆ ಬಗ್ಗೆ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧಾರ ಕೈಗೊಂಡಿದ್ದರು. ಆ ಸಭೆಯ ನಡಾವಳಿಗೂ ಈ ಪ್ರಕರಣಕ್ಕೂ ಸಂಬಂಧ ಇದೆಯಾ? ಎಂಬ ಬಗ್ಗೆನೂ ಮಾಹಿತಿ ಪಡೆಯಲಾಗುತ್ತದೆ. ಕಂದಾಯ ಆಯುಕ್ತರಿಂದ ಈ ಪ್ರಕರಣದ ಸಂಬಂಧ ಸಂಪೂರ್ಣ ತನಿಖೆ ಮಾಡುತ್ತೇವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

ನ್ಯಾಯಾಂಗ ತನಿಖೆಗೆ ಒತ್ತಾಯ:

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನ್ಯಾಯಾಂಗ ತನಿಖೆಗೆ ಒತ್ತಾಯ ಮಾಡಿದರು. ಅಕ್ರಮ ಗಣಿಗಾರಿಕೆ ರಾಜ್ಯದಲ್ಲಿ ‌ನಡೆಯುತ್ತಿದೆ ಎಂದು ಸರ್ಕಾರ ಒಪ್ಪಿಕೊಂಡಿದೆ. ಕುಲಕರ್ಣಿ ಮೇಲೆ 2018 ರಲ್ಲೇ ಕೇಸ್ ಹಾಕಲಾಗಿತ್ತು. ಆ ಮೇಲೆಯೂ ಅವರು ಕ್ರಷರ್ ನಡೆಸುತ್ತಾರೆ. ಅದೇ ಸರ್ವೇ ನಂ.ನಲ್ಲಿ 20 ವರ್ಷಗಳಿಂದ ಕ್ವಾರಿ ನಡೆಯುತ್ತಿದೆ. ಅಧಿಕಾರಿಗಳು ಸ್ಥಳ ತಪಾಸಣೆ ಮಾಡಬೇಕಿತ್ತಲ್ಲಾ?. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಈ ಬಗ್ಗೆ ತನಿಖೆ ನಡೆಸಬೇಕಿತ್ತಲ್ಲಾ? ಎಂದು ಪ್ರಶ್ನಿಸಿದರು.

ಜ.7 ರಂದು ಅರಣ್ಯ ಇಲಾಖೆಯ ಡಿಸಿಎಫ್ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ವರದಿ ನೀಡಿದ್ದರು. ಅದರ ಬಗ್ಗೆ ಡಿಸಿ ಅವರು ಏನು ಮಾಡಿದ್ದರು?, ರಾಜ್ಯದ ಹಿತದೃಷ್ಟಿಯಿಂದ ಹೈ ಕೋರ್ಟ್ ನ್ಯಾಯಾಧೀಶರಿಂದ ಈ ಕುರಿತು ತನಿಖೆ ಮಾಡಿಸಿ. ಆಗ ಸತ್ಯ ಹೊರಬರಲಿದೆ. ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸಬಹುದು ಎಂದು ನ್ಯಾಯಾಂಗ ತನಿಖೆ ನಡೆಸುವಂತೆ ಆಗ್ರಹಿಸಿ ಸಿದ್ದರಾಮಯ್ಯನವರು ಸಭಾತ್ಯಾಗ ಮಾಡಿದರು‌.

ABOUT THE AUTHOR

...view details