ಕರ್ನಾಟಕ

karnataka

ETV Bharat / city

ಸಂತ್ರಸ್ತೆಯನ್ನು ಮದುವೆಯಾದ್ರೂ ಅತ್ಯಾಚಾರಿ ವಿರುದ್ಧದ ರೇಪ್​ ಕೇಸ್​ ರದ್ದಾಗಲ್ಲ: ಹೈಕೋರ್ಟ್ - High court decision on rape case

ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯನ್ನು ಆರೋಪಿ ಮದುವೆಯಾದ ಎಂಬ ಕಾರಣಕ್ಕಾಗಿ ಆತನ ವಿರುದ್ಧ ದಾಖಲಾದ ಕೇಸ್​ಅನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.

By

Published : Nov 24, 2021, 7:31 PM IST

ಬೆಂಗಳೂರು:ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯನ್ನು ಆರೋಪಿ ಮದುವೆಯಾದ ಎಂಬ ಕಾರಣಕ್ಕಾಗಿ ಆಪಾದಿತನ ವಿರುದ್ಧ ದಾಖಲಾದ ಅತ್ಯಾಚಾರ ಪ್ರಕರಣವನ್ನು ರದ್ದುಪಡಿಸಲು ಹೈಕೋರ್ಟ್​ ನಿರಾಕರಿಸಿದೆ.

ಅತ್ಯಾಚಾರ ಆರೋಪ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಕೋರಿ ಆರೋಪಿ ಹಾಗೂ ಸಂತ್ರಸ್ತೆ ಜಂಟಿಯಾಗಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್.ಪಿ ಸಂದೇಶ್ ಅವರಿದ್ದ ಏಕಸದಸ್ಯ ಪೀಠ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ವಿಜಯಪುರ ನ್ಯಾಯಾಲಯದಲ್ಲಿ ಆರೋಪಿ ವಿರುದ್ಧ ನಡೆಯುತ್ತಿರುವ ಅತ್ಯಾಚಾರ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಆಪಾದಿತ ವ್ಯಕ್ತಿ ಹಾಗೂ ಆತನನ್ನು ಮದುವೆಯಾಗಿರುವ ಸಂತ್ರಸ್ತೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯಲ್ಲಿ ಘಟನೆ ನಡೆದ ಸಂದರ್ಭದಲ್ಲಿ ಅಪ್ರಾಪ್ತೆ ಎನ್ನಲಾದ ಸಂತ್ರಸ್ತೆಗೆ ಈಗ 19 ವರ್ಷ ವಯಸ್ಸಾಗಿದ್ದು, ನಾವಿಬ್ಬರೂ ವಿವಾಹವಾಗಿದ್ದೇವೆ. ಆದ್ದರಿಂದ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಕೋರಿದ್ದರು.

ಅರ್ಜಿ ವಿಚಾರಣೆ ನಡೆಸಿದ ಪೀಠ, ಅತ್ಯಾಚಾರ ಪ್ರಕರಣದಲ್ಲಿ ತನ್ನನ್ನು ಮದುವೆಯಾಗಲು ಸಂತ್ರಸ್ತೆ(ಅಪ್ರಾಪ್ತೆಯಾಗಿದ್ದರೆ) ಒಪ್ಪಿಗೆ ನೀಡಿದ್ದರೂ, ಅದನ್ನು ಕೋರ್ಟ್​ ಮಾನ್ಯ ಮಾಡುವುದಿಲ್ಲ. ಘಟನೆ ನಡೆದ ಸಂದರ್ಭದಲ್ಲಿ ಆಕೆ ಅಪ್ರಾಪ್ತೆಯಾಗಿದ್ದಳೋ ಅಥವಾ ವಯಸ್ಕಳೋ ಎಂಬುದನ್ನು ವಿಚಾರಣಾ ನ್ಯಾಯಾಲಯವೇ ನಿರ್ಧರಿಸಲಿದೆ ಎಂದು ಕೋರ್ಟ್ ಹೇಳಿದೆ.

ಮುಖ್ಯವಾಗಿ ಅತ್ಯಾಚಾರ ಹಾಗೂ ಪೋಕ್ಸೋ ಪ್ರಕರಣಗಳಲ್ಲಿ ಅಪರಾಧ ದಂಡ ಸಂಹಿತೆಯ ಸೆಕ್ಷನ್ 482 ನ್ನು ಬಳಸಿ ಪ್ರಕರಣವನ್ನು ರದ್ದುಪಡಿಸುವುದು ಸರಿಯಲ್ಲ. ಹೀಗೆ ಮಾಡಿದಲ್ಲಿ ಅದು ಸಮಾಜಕ್ಕೆ ಕೆಟ್ಟ ಸಂದೇಶವನ್ನು ರವಾನಿಸಿದಂತಾಗುತ್ತದೆ. ಇದರಿಂದ ಸಂತ್ರಸ್ತೆ ಹಾಗೂ ಆರೋಪಿ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಅರ್ಜಿಯನ್ನು ವಜಾ ಮಾಡಿದೆ.

ABOUT THE AUTHOR

...view details