ಬೆಂಗಳೂರು:ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದ ಕಾರಣ ಮುಂಜಾಗ್ರತಾ ಕ್ರಮವಾಗಿ ರಾಜ್ಯದ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಶಾಲೆಗಳ ಬಾಗಿಲು ಮುಚ್ಚಿ 8 ತಿಂಗಳೇ ಕಳೆದಿದೆ. ಆದರೆ, ಲಾಕ್ಡೌನ್ನಲ್ಲಿ ಬಿಸಿಯೂಟದ ಬದಲಿಗೆ ಆಹಾರ ಪದಾರ್ಥಗಳನ್ನು ವಿತರಿಸುತ್ತಿದ್ದ ಕ್ರಮಕ್ಕೆ ಬ್ರೇಕ್ ಬಿದ್ದಿದ್ದು, ಆಕ್ರೋಶ ವ್ಯಕ್ತವಾಗಿದೆ.
ಲಾಕ್ಡೌನ್ಗೂ ಮುನ್ನ ಶಾಲೆಯಲ್ಲೇ ಮಧ್ಯಾಹ್ನದ ಬಿಸಿಯೂಟ ಒದಗಿಸಲಾಗುತ್ತಿತ್ತು. ಕೊರೊನಾ ಕಾರಣ ಅದನ್ನು ಸ್ಥಗಿತಗೊಳಿಸಲಾಯಿತು. ಸರ್ಕಾರಿ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದವರೇ ಹೆಚ್ಚು. ಹೀಗಾಗಿ, ರಜೆ ಘೋಷಿಸಿದ ಕಾರಣ ಸಂಕಷ್ಟಕ್ಕೆ ಸಿಲುಕಿದ ಬಡ ಪೋಷಕರು, ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ಕಾರ್ಯಕ್ರಮ ಮುಂದುವರೆಸುವಂತೆ ಕೋರಿದ್ದರು.
ಮನಗಂಡ ಸರ್ಕಾರ ಬಿಸಿಯೂಟದ ಬದಲಿಗೆ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲು ನಿರ್ಧರಿಸಿತು. ಪ್ರತಿ ವಿದ್ಯಾರ್ಥಿಗೆ ವಿತರಿಸಬೇಕಾದ ಆಯಾ ದಿನದ ಆಹಾರ ಪ್ರಮಾಣವನ್ನು ಅಕ್ಕಿ, ಧಾನ್ಯ ಮತ್ತು ತೊಗರಿ ಬೇಳೆ ವಿತರಿಸಲು ಕ್ರಮ ಕೈಗೊಂಡಿತು. ಆರಂಭದಲ್ಲಿ ಮಾರ್ಚ್, ಏಪ್ರಿಲ್, ಮೇನಲ್ಲಿ ವಿತರಿಸಲಾಯಿತು. ಅದಾದ ನಂತರ ಅದನ್ನೂ ಸ್ಥಗಿತಗೊಳಿಸಿತು.
ಮಾರ್ಚ್ 14 ರಿಂದ ಏಪ್ರಿಲ್ 10ರವರೆಗೆ ಒಟ್ಟು 21 ದಿನಗಳು ಹಾಗೂ ಏಪ್ರಿಲ್ 11 ಮೇ 28 ರವರೆಗೆ 47 ದಿನಗಳ ಲೆಕ್ಕಾಚಾರ ಮಾಡಿ ಆಹಾರ ಪದಾರ್ಥ ಒಂದೇ ಬಾರಿಗೆ ಪೋಷಕರಿಗೆ ವಿತರಿಸಲು ಸೂಚಿಸಲಾಗಿತ್ತು. ಆದರೆ, ಇದೀಗ ಕೊರೊನಾದಿಂದ ಮಧ್ಯಾಹ್ನ ಬಿಸಿಯೂಟದ ಪರ್ಯಾಯ ನೀಡುತ್ತಿದ್ದ ಆಹಾರ ಧಾನ್ಯ ವಿತರಣೆಗೆ ಬ್ರೇಕ್ ಹಾಕಲಾಗಿದೆ. ಒಟ್ಟು 42,34,540 ಮಕ್ಕಳು ಇದರ ಫಲಾನುಭವಿಯಾಗಿದ್ದರು.
ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ಮಾತನಾಡಿ, ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಬಿಸಿಯೂಟದ ಬದಲು ಆಹಾರ ಪದಾರ್ಥಗಳನ್ನು 58 ದಿನಗಳವರೆಗೆ ನೀಡಲು ಸೂಚಿಸಿತ್ತು. ಈಗ ಅದರ ಅವಧಿ ಮುಗಿದಿದ್ದು, ಜೂನ್-ಜುಲೈ ತಿಂಗಳ ಆಹಾರ ಪದಾರ್ಥ ವಿತರಣೆಗೆ ಸದ್ಯಕ್ಕೆ ತಡೆ ಹಾಕಲಾಗಿದೆ. ಸರ್ಕಾರದ ಮುಂದಿನ ಆದೇಶದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ಯಾವ ಮಕ್ಕಳಿಗೆ ಎಷ್ಟೆಷ್ಟು ಆಹಾರ ಧಾನ್ಯ
- 1-5 ನೇ ತರಗತಿ: 100 ಗ್ರಾಂ. ಅಕ್ಕಿ, 50 ಗ್ರಾಂ. ತೊಗರಿ ಬೇಳೆ
- 6-10ನೇ ತರಗತಿ: 150 ಗ್ರಾಂ. ಅಕ್ಕಿ, 75 ಗ್ರಾಂ. ತೊಗರಿ ಬೇಳೆ
ಆಹಾರ ಪದಾರ್ಥಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಕಾರಣ ಸದ್ಯ ನಿಲ್ಲಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಹಿರಿಯ ಅಧಿಕಾರಿಗಳು ಹಾಗೂ ಸಚಿವರ ಸಭೆ ಶೀಘ್ರ ನಡೆಯಲಿದ್ದು, ಶಾಲೆ ಆರಂಭದವರೆಗೆ ಆಹಾರ ಪದಾರ್ಥ ವಿತರಣೆ ಮಾಡಬೇಕೇ ಬೇಡವೇ ಎಂಬುದನ್ನು ನಿರ್ಧಾರ ಮಾಡುಲಾಗುತ್ತದೆ.