ಬೆಂಗಳೂರು:ಪ್ರವಾಹಕ್ಕೆ ರಾಜ್ಯದಲ್ಲಿ ಹಾನಿಗೀಡಾದ ರಸ್ತೆ, ಸೇತುವೆಗಳು ಅಪಾರ. ಆದರೆ, ಇದರಲ್ಲಿ ಈವರೆಗೂ ಪೂರ್ಣಗೊಂಡಿರುವ ದುರಸ್ತಿ ಕಾಮಗಾರಿಗಳು ಬೆರಳೆಣಿಕೆಯಷ್ಟು ಮಾತ್ರ.
ಲೋಕೋಪಯೋಗಿ ಇಲಾಖೆಯ ಇತ್ತೀಚಿನ ಅಂಕಿ-ಅಂಶಗಳಲ್ಲಿ ನೆರೆ ಪರಿಹಾರ ಕಾಮಗಾರಿ ಪ್ರಗತಿಯ ವಸ್ತುಸ್ಥಿತಿ ನೋಡಿದರೆ ಶಾಕ್ ಆಗುವುದು ಖಂಡಿತ. ಸಾವಿರಾರು ಕಿಲೋಮೀಟರ್ ರಸ್ತೆಗಳು ಹಾಗೂ ನೂರಾರು ಸೇತುವೆಗಳು ಭೀಕರ ಪ್ರವಾಹಕ್ಕೆ ಕೊಚ್ಚಿ ಹೋಗಿವೆ. ನೆರೆಗೆ 1,166 ಕಿ.ಮೀ. ರಾಜ್ಯ ಹೆದ್ದಾರಿ, 2,341 ಕಿ.ಮೀ. ಪ್ರಮುಖ ಜಿಲ್ಲಾ ರಸ್ತೆಗಳು ಹಾನಿಯಾಗಿವೆ. ನೆರೆ ಪರಿಹಾರ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುತ್ತಿದ್ದೇವೆ ಎಂದು ಸರ್ಕಾರ ಹೇಳುತ್ತಿದ್ದರೂ, ವಾಸ್ತವದಲ್ಲಿ ಮಾತ್ರ ನಿರಾಶಾದಾಯಕವಾಗಿದೆ.
ಲೋಕೋಪಯೋಗಿ ಇಲಾಖೆಯ ಅಂಕಿ-ಅಂಶ ಇಂತಿದೆ...
ಉತ್ತರ ವಲಯ:
ಹಾನಿಯಾದ ರಸ್ತೆ, ಸೇತುವೆಗಳ ದುರಸ್ತಿಗೆ ಸಂಬಂಧಿಸಿದಂತೆ 1,016 ಕಾಮಗಾರಿಗಳ ಪೈಕಿ ಈವರೆಗೂ ಕೈಗೆತ್ತಿಕೊಂಡಿರುವ 724 ಕಾಮಗಾರಿಗಳು ಆರಂಭಿಕ ಹಂತದಲ್ಲಿವೆ. ಉಳಿದ 292 ಕಾಮಗಾರಿಗಳು ಇನ್ನೂ ಆರಂಭ ಆಗಿಲ್ಲ. ಅಂದಾಜು ₹ 3,017.43 ಕೋಟಿ ಹಾನಿಯಾಗಿದ್ದು, ₹ 227 ಕೋಟಿ ಮಾತ್ರ ಬಿಡುಗಡೆಯಾಗಿದೆ.