ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾನಿಲಯಕ್ಕೆ ಸೇರಿದ 1,112 ಎಕರೆ ಪ್ರದೇಶದಲ್ಲಿನ 18 ಎಕರೆ ಭೂಮಿಯನ್ನು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರನ್ನೊಳಗೊಂಡ ವಿಭಾಗೀಯ ಪೀಠವು ನಗರದ ವಕೀಲರಾದ ಕೆ.ಬಿ. ವಿಜಯಕುಮಾರ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ಆದೇಶ ನೀಡಿದೆ.
ರಾಜ್ಯ ಸರ್ಕಾರವು ನೀಡಿದ ಅನುಮತಿಯಲ್ಲಿ ಯಾವುದೇ ತಪ್ಪುಗಳು ಕಾಣಿಸುತ್ತಿಲ್ಲ ಎಂದು ಪೀಠವು ಹೇಳಿತು, ಶಾಸನಬದ್ಧ ಹಕ್ಕು ಅಥವಾ ಯಾವುದೇ ಮೂಲಭೂತ ಹಕ್ಕಿನ ಉಲ್ಲಂಘನೆಯ ಪ್ರಕರಣವನ್ನು ಎತ್ತಿ ತೋರಿಸಲು ಅರ್ಜಿದಾರರು ವಿಫಲರಾಗಿದ್ದಾರೆ ಎಂದು ನ್ಯಾಯಪೀಠ ತಿಳಿಸಿತು.
ಇಂಟರ್ ಯೂನಿವರ್ಸಿಟಿ ಸೆಂಟರ್ ಫಾರ್ ಯೋಗಿಕ್ ಸೈನ್ಸಸ್‌ಗೆ (ಐಯುಸಿವೈಎಸ್) 15 ಎಕರೆ ಜಮೀನು, ಸೆಂಟರ್ ಆಫ್ ಆರ್ಕಿಟೆಕ್ಚರ್ ಅಂಡ್ ಡೆವಲಪ್‌ಮೆಂಟ್‌ನ ಪ್ರಾದೇಶಿಕ ಕೇಂದ್ರಕ್ಕೆ ಎರಡು ಎಕರೆ ಮತ್ತು ಸೆಂಟ್ರಲ್ ಬೋರ್ಡ್ ಫಾರ್ ಸೆಕೆಂಡರಿ ಎಜುಕೇಶನ್‌ಗೆ ತನ್ನ ಪ್ರಾದೇಶಿಕ ಕಚೇರಿಯನ್ನು ಸ್ಥಾಪಿಸಲು ಒಂದು ಎಕರೆ ಭೂಮಿಯನ್ನು ಗುತ್ತಿಗೆ ನೀಡಿರುವುದನ್ನು ಅರ್ಜಿದಾರರು ಪ್ರಶ್ನಿಸಿದ್ದರು.