ಬೆಂಗಳೂರು :ಹೊರ ಜಗತ್ತಿನ ಸಂಪರ್ಕ ಇಲ್ಲದೇ ನಾಲ್ಕು ಗೋಡೆಗಳ ಮಧ್ಯೆ ಇರುವ ಜೈಲು ಹಕ್ಕಿಗಳಿಗೂ ಕೊರೊನಾ ಸೋಂಕು ವಕ್ಕರಿಸಿತ್ತು. ಆದರೆ, ಜೈಲು ಅಧಿಕಾರಿಗಳ ಮುಂಜಾಗ್ರತಾ ಕ್ರಮದಿಂದ ಸದ್ಯದ ಮಟ್ಟಿಗೆ ಜೈಲಿನಲ್ಲಿ ಸೋಂಕು ಕಡಿಮೆಯಾಗಿದೆ. ಹೊರ ಜಗತ್ತಿನಲ್ಲಿರುವ ನಮಗೆ ಆರೋಗ್ಯ ಇಲಾಖೆ ಸೂಚಿಸಿದಂತೆ ಚಿಕಿತ್ಸೆ ದೊರೆಯುತ್ತದೆ. ಆದರೆ, ಖೈದಿಗಳಲ್ಲಿ ಸೋಂಕಿತರಿಗೆ ಜೈಲಾಧಿಕಾರಿಗಳೇ ಚಿಕಿತ್ಸೆ ನೀಡಬೇಕಾಗುತ್ತದೆ.
15 ಸಾವಿರ ಖೈದಿಗಳು:ಬೆಂಗಳೂರಿನ ಪರಪ್ಪನ ಅಗ್ರಹಾರವು ಜೈಲು 3,500 ಖೈದಿಗಳ ಸಾಮರ್ಥ್ಯ ಹೊಂದಿದೆ. ಆದರೆ, ಅದರಲ್ಲಿ 4,953 ಪುರುಷರು, 197 ಮಹಿಳೆಯರು, 10 ಮಕ್ಕಳು ಸೇರಿ 5000ಕ್ಕೂ ಅಧಿಕ ಮಂದಿಯನ್ನು ಜೈಲಿನಲ್ಲಿಡಲಾಗಿದೆ.
ರಾಜ್ಯದಲ್ಲಿ ಒಟ್ಟು 47 ಕಾರಾಗೃಹಗಳಿವೆ. ಅವುಗಳಲ್ಲಿ 9 ಕೇಂದ್ರ ಕಾರಾಗೃಹ, 21 ಜಿಲ್ಲಾ ಕಾರಾಗೃಹ, 1 ಬಯಲು ಕಾರಾಗೃಹ ಹಾಗೂ 13 ತಾಲೂಕು ಹಾಗೂ 3 ಕಂದಾಯ ಕಾರಾಗೃಹಗಳಿವೆ. ಒಟ್ಟು 15,120 (13,885 ಪುರುಷ, 688 ಮಹಿಳಾ ಕೈದಿಗಳು) ಪೈಕಿ ವಿಚಾರಣಾಧೀನಾ ಖೈದಿಗಳು 11,444, ಸಜಾ ಖೈದಿಗಳು 3,899 ಮಂದಿ ಇದ್ದಾರೆ.
2,665 ಟೆಸ್ಟ್: ಜೈಲು ಅಧಿಕಾರಿಗಳ ಮಾಹಿತಿ ಪ್ರಕಾರ ಬಹುತೇಕ ಖೈದಿಗಳಿಗೆ ಸೋಂಕು ತಗುಲಿದೆ. ತಕ್ಷಣ ಜೈಲಲ್ಲೇ ಇರುವ ಆಸ್ಪತ್ರೆಗಳಲ್ಲಿ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಹೆಚ್ಚಿನ ಚಿಕಿತ್ಸೆಗೆ ಬೇಕೆಂದ್ರೆ ಹೊರಗಿನ ಸರ್ಕಾರಿ ಆಸ್ಪತ್ರೆ ಅಥವಾ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗುತ್ತದೆ. ಕೊರೊನಾ ಮಹಾಮಾರಿ ಎಲ್ಲೆಡೆ ವ್ಯಾಪಿಸಿದಾಗ ಜೈಲಾಧಿಕಾರಿಗಳಿಗೆ ಭಯ ಉಂಟಾಗಿತ್ತು. ಯಾಕೆಂದರೆ, ಜೈಲಿನಲ್ಲಿ ಒಬ್ಬರಿಗೆ ಕೊರೊನಾ ಬಂದ್ರೆ ಅದು ಎಲ್ಲರಿಗೂ ಹರಡಲಿದೆ. ಹೀಗಾಗಿ, ಲಾಕ್ಡೌನ್ ಸಂದರ್ಭದಲ್ಲಿ ಹೊರಗಡೆ ಜಗತ್ತಿನ ಸಂಪರ್ಕ ಕಡಿತ ಮಾಡಿ ಖೈದಿಗಳಿಗೆ ಕುಟುಂಬಸ್ಥರ ಭೇಟಿಗೆ ಅವಕಾಶ ಮಾಡಿಕೊಟ್ಟಿರಲಿಲ್ಲ. ಈಗಲೂ ಅದನ್ನೇ ಅನುಕರಣೆ ಮಾಡಲಾಗುತ್ತಿದೆ. ಈವರೆಗೆ 2,665 ಖೈದಿಗಳಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ.
ನೆಗಟಿವ್ ಬಂದರೆ ಮಾತ್ರ ಜೈಲಿಗೆ ಅನುಮತಿ:ಇದರಲ್ಲಿ ಒಟ್ಟು 303 ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಅವರ ಜೊತೆಗೆ ಸಂಪರ್ಕವಿರುವ ಖೈದಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಹಾಗೆಯೇ ಹೊಸತಾಗಿ ಬರುವ ಖೈದಿಗಳನ್ನು ಜೈಲಿನೊಳಗಡೆ ಸೇರಿಸುವ ಮೊದಲು ಕೊರೊನಾ ಪರೀಕ್ಷೆ ನಡೆಸಲಾಗುತ್ತದೆ. ನೆಗೆಟಿವ್ ವರದಿ ಬಂದ್ರೆ ಮಾತ್ರ ಜೈಲಿಗೆ ಸೇರಿಸಲು ಅನುಮತಿ ನೀಡಲಾಗುತ್ತದೆ. ಅಷ್ಟೇ ಅಲ್ಲ, ಆರೋಪಿಗಳನ್ನು 20 ದಿನ ಪ್ರತ್ಯೇಕ ಕ್ವಾರಂಟೈನ್ ಮಾಡಲಾಗುತ್ತದೆ. ಮತ್ತೆ ಟೆಸ್ಟ್ ನಡೆಸಿದ ಬಳಿಕ ಬ್ಯಾರಕ್ ಒಳಗಡೆ ಹಾಕುವ ವ್ಯವಸ್ಥೆ ಇದೆ.
ಸಕ್ರಿಯ ಪ್ರಕರಣಗಳಿಷ್ಟು..: ಜೈಲಾಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಂಡ ಕಾರಣ ಕೊರೊನಾ ಪ್ರಕರಣ ಕಡಿಮೆಯಾಗಿವೆ. ಪ್ರಮುಖ ಜೈಲಾದ ಪರಪ್ಪನ ಅಗ್ರಹಾರದಲ್ಲಿ 2 ಸಕ್ರಿಯ, ಕೋಲಾರ, ಮೈಸೂರು, ಶಿವಮೊಗ್ಗ, ಧಾರವಾಡದಲ್ಲಿ ತಲಾ ಒಂದು ಸೇರಿ ಒಟ್ಟು 7 ಸಕ್ರಿಯ ಪ್ರಕರಣಗಳಿವೆ, ಅವರೆಲ್ಲ ಸುರಕ್ಷಿತವಾಗಿದ್ದಾರೆ. ಜೈಲಿನಲ್ಲಿ ಖೈದಿಗಳು ಮಾಸ್ಕ್ ಧರಿಸಿಯೇ ಇರಬೇಕು. ಅಧಿಕಾರಿಗಳ ಸೂಚನೆ ಇಲ್ಲದೆ ಬ್ಯಾರಕ್ ಬಿಟ್ಟು ಬರುವಂತಿಲ್ಲ. ಬಿಸಿ ನೀರು ಕುಡಿಯಬೇಕು. ವಿಟಮಿನ್ ಸಿ ಮಾತ್ರೆಗಳನ್ನು ತೆಗೆದುಕೊಳ್ಳಬೇಕು. ಒಂದು ವೇಳೆ ದೇಹದ ಉಷ್ಣಾಂಶದಲ್ಲಿ ಏರು-ಪೇರಾದ್ರೆ ಅಧಿಕಾರಿಗಳ ಗಮನಕ್ಕೆ ತಂದು ಚಿಕಿತ್ಸೆ ಪಡಿಯಬೇಕಾಗಿದೆ.
ಕೊರೊನಾ ಹಿನ್ನೆಲೆ ಸುಪ್ರೀಂಕೋರ್ಟ್ 7 ವರ್ಷಕ್ಕಿಂತ ಕಡಿಮೆ ಶಿಕ್ಷೆ ಹೊಂದಿರುವ ಖೈದಿಗಳನ್ನು ದಂಡದೊಂದಿಗೆ ಬಿಡುಗಡೆ ಮಾಡುವಂತೆ ಸೂಚಿಸಿತ್ತು. ಹೀಗಾಗಿ, ಮಾರ್ಚ್ ಅಂತ್ಯದವರೆಗೆ 1,552 ಖೈದಿಗಳನ್ನು ಬಿಡುಗಡೆ ಮಾಡಲಾಗಿತ್ತು. ತದ ನಂತರ ಕೊರೊನಾ ಜಾಸ್ತಿಯಾದ ಕಾರಣ ಲಾಕ್ಡೌನ್ ಹೇರಲಾಗಿತ್ತು. ಈ ವೇಳೆ ಬಹುತೇಕ ಮಂದಿ ಕೆಲಸ ಕಳೆದುಕೊಂಡಿದ್ದರು. ಅನ್ಲಾಕ್ ಬಳಿಕ ಜನರಿಗೆ ಕೆಲಸ ಇಲ್ಲದ ಕಾರಣ ರಾಜ್ಯದಲ್ಲಿ ಒಂದಲ್ಲ, ಒಂದು ಅಪರಾಧ ಘಟನೆಗಳು ಬೆಳಕಿಗೆ ಬರ್ತಿವೆ. ಹೀಗಾಗಿ, ಖೈದಿಗಳ ಸಂಖ್ಯೆ ಜಾಸ್ತಿಯಾಗಿದೆ. ಕೊರೊನಾ ನಂತರ 58 ಖೈದಿಗಳು ಹೊರಗಡೆ ಜಾಮೀನಿನಲ್ಲಿ ಹೋಗಿದ್ದಾರೆ. ಉಳಿದ ಖೈದಿಗಳು ಪೆರೋಲ್ ಮೇಲೆ ಬಿಡುಗಡೆಯಾಗದೆ ಹಾಗೆ ಇದ್ದಾರೆ.
ಜೈಲಿನ ಸಾಮರ್ಥ್ಯಕ್ಕಿಂತ ಹೆಚ್ಚಾಗಿ ಖೈದಿಗಳ ಸಂಖ್ಯೆ ಜಾಸ್ತಿ ಆಗ್ತಿದೆ. ಸರ್ಕಾರ ಕೂಡ ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯಂದು ಜೈಲು ಹಕ್ಕಿಗಳ ಬಿಡುಗಡೆ ಮಾಡೋದಕ್ಕೆ ಮನಸ್ಸು ಮಾಡಿಲ್ಲ. ಜೈಲಾಧಿಕಾರಿಗಳು ಸನ್ನಡತೆ ಇರುವವರನ್ನು ಬಿಡುಗಡೆಗೊಳಿಸಲು ಪಟ್ಟಿ ಮಾಡಿಕೊಟ್ಟರು ಕೂಡ ಅದರ ಬಗ್ಗೆ ಸರ್ಕಾರ ತಲೆಕೆಡೆಸಿಕೊಂಡಿಲ್ಲ. ಜೈಲಿನಲ್ಲಿ ಕೊರೊನಾ ಕಡಿಮೆಯಾಗಿದೆ. ಇದರಿಂದ ಅಧಿಕಾರಿಗಳು ನಿಟ್ಟುಸಿರು ಬಿಡುವಂತಾಗಿದೆ. ಆದರೆ, ಜೈಲು ಹಕ್ಕಿಗಳು ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ. ಹೀಗಾಗಿ, ಮಾನಸಿಕವಾಗಿ ಕುಗ್ಗ ಬಾರದೆಂದು ಜೈಲಿನಲ್ಲಿ ಬ್ಯಾರಕ್ ಒಳಗಡೆಯೇ ಮಾಸ್ಕ್ ತಯಾರಿ, ಬಟ್ಟೆ ತಯಾರಿ ಹೀಗೆ ಒಂದೊಂದು ಕೆಲಸ ಕೊಟ್ಟು ಸಕ್ರಿಯವಾಗಿ ಇರುವಂತೆ ನೋಡಿಕೊಂಡಿದ್ದಾರೆ.