ಬೆಂಗಳೂರು: ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿಯಲ್ಲಿ ಕಂಟೋನ್ಸೆಂಟ್‌ನಿಂದ ಪಾಟರಿಟೌನ್ ಮಾರ್ಗದಲ್ಲಿ 'ಊರ್ಜಾ' ಯಂತ್ರ ಒಂದೇ ದಿನದಲ್ಲಿ 27 ಮೀಟರ್ ಸುರಂಗ ಕೊರೆಯುವ ಮೂಲಕ ದಾಖಲೆ ನಿರ್ಮಿಸಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಮೆಟ್ರೋ ಮೊದಲ ಹಂತದ ಕಾಮಗಾರಿ ವೇಳೆ ಮೆಜೆಸ್ಟಿಕ್‌ನಿಂದ ಕೆಎಸ್‌ಆರ್ ರೈಲು ನಿಲ್ದಾಣ ನಡುವಿನ 27 ಮೀಟರ್ ಸುರಂಗ ಮಾರ್ಗವನ್ನು ಒಂದೇ ದಿನ ಕೊರೆಯುವ ಮೂಲಕ ದಾಖಲೆ ನಿರ್ಮಿಸಲಾಗಿತ್ತು. ಈಗ ‘ಊರ್ಜಾ’ ಟನಲ್ ಬೋರಿಂಗ್ ಯಂತ್ರ (TBM) ಕೂಡ ಆ ಸಾಲಿಗೆ ಸೇರಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೊಸ ದಾಖಲೆ ಎಂದ ನಮ್ಮ ಮೆಟ್ರೋ ಏಪ್ರಿಲ್ 11ರಂದು ಶಿವಾಜಿನಗರದಿಂದ ಎಂ.ಜಿ. ರಸ್ತೆ ನಡುವೆ ಸುರಂಗ ಕೊರೆಯುವ ಕಾರ್ಯಾರಂಭ ಮಾಡಿರುವ 'ಲವಿ' ಟಿಬಿಎಂ ಒಂದೇ ದಿನದಲ್ಲಿ 19.6 ಮೀಟರ್ ಸುರಂಗ ಕೊರೆದಿತ್ತು. ಇದು 2ನೇ ಹಂತದಲ್ಲಿನ ಈವರೆಗಿನ ದಾಖಲೆಯಾಗಿದೆ ಎಂದಿದ್ದಾರೆ.
ಓದಿ:ಆರ್ಥಿಕ ಸಂಕಷ್ಟದಿಂದ ಹಳಿಯ ಮೇಲೆ ನಮ್ಮ ಮೆಟ್ರೋ.. ವರ್ಷದಿಂದ ವರ್ಷಕ್ಕೆ ನಷ್ಟದ ಹಾದಿಯತ್ತ..
ಸಾಮರ್ಥ್ಯ ಪ್ರದರ್ಶನ:ಕಂಟೋನ್ಮಂಟ್ನಿಂದ ಪಾಟರಿ ಟೌನ್ ಮಾರ್ಗದಲ್ಲಿ ಊರ್ಜಾ ಯಂತ್ರ ಸದ್ಯ ಸುರಂಗ ಮಾರ್ಗ ನಿರ್ಮಾಣದಲ್ಲಿ ತೊಡಗಿದೆ. ಸಾಮಾನ್ಯವಾಗಿ ಟಿಬಿಎಮ್ ಯಂತ್ರವು ಕಲ್ಲು ಬಂಡೆ ಎದುರಾದರೆ ನಿತ್ಯ ಸರಾಸರಿ 3 ಮೀಟರ್ ಸುರಂಗ ಮಾರ್ಗ ಕೊರೆಯುತ್ತದೆ. ಭೂಮಿಯಡಿ ಮಣ್ಣಿನ ಪದರ ಎದುರಾದರೆ 10 ರಿಂದ 12 ಮೀಟರ್ ಕೊರೆಯುತ್ತದೆ. ಆದರೆ, ಒಂದೇ ದಿನ 27 ಮೀಟರ್ ಉದ್ದ ಕೊರೆಯುವ ಮೂಲಕ ತನ್ನ ಸಾಮರ್ಥ್ಯ ಪ್ರದರ್ಶಿಸಿದೆ. ಏಪ್ರಿಲ್ 25ರಂದು ಊರ್ಜಾ ಯಂತ್ರ ಈ ದಾಖಲೆ ನಿರ್ಮಿಸಿದೆ ಎಂದು ಹೇಳಿದ್ದಾರೆ.
500 ಮೀಟರ್ ನಷ್ಟು ಸುರಂಗ ನಿರ್ಮಾಣ: 20 ಆಗಸ್ಟ್ 2020ರಂದು ಮೆಟ್ರೊ ಎರಡನೇ ಹಂತದ ರೈಲ್ವೆ ಮಾರ್ಗದಲ್ಲಿ 9 ಟಿಬಿಎಮ್ ಯಂತ್ರಗಳ ಪೈಕಿ ಊರ್ಜಾ ಮೊದಲಿಗೆ ಕಂಟೋನ್ಮಂಟ್ನಿಂದ ಶಿವಾಜಿನಗರ ಮಾರ್ಗದಲ್ಲಿ ಸುರಂಗಮಾರ್ಗ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿ ಮೊದಲ ಹಂತದಲ್ಲಿ 864.7 ಮೀಟರ್ ಮಾರ್ಗವನ್ನು ನಿರ್ಮಿಸುವಲ್ಲಿ ಯಶಸ್ವಿಯಾಯಿತು. ಆನಂತರ ಎರಡನೇ ಹಂತದಲ್ಲಿ 28 ಡಿಸೆಂಬರ್ 2021ರಂದು ಕಂಟೋನ್ಮೆಂಟ್ನಿಂದ ಪಾಟರಿಟೌನ್ವರೆಗೆ 900 ಮೀಟರ್ ಸುರಂಗ ಕೊರೆಯಲು ಆರಂಭಿಸಿ ಈ ತನಕ ಅಂದಾಜು 500 ಮೀಟರ್ನಷ್ಟು ಸುರಂಗ ನಿರ್ಮಾಣ ಮಾಡಿದೆ ಎಂದು ತಿಳಿಸಿದ್ದಾರೆ.
24 ಗಂಟೆಗಳ ಕಾಲ ಟಿಬಿಎಂ ಯಂತ್ರಗಳ ಕಾರ್ಯನಿರ್ವಹಣೆ: ದಿನದ 24 ಗಂಟೆಗಳ ಕಾಲವೂ ಮೆಟ್ರೊ ಟಿಬಿಎಂ ಯಂತ್ರಗಳು ಕಾರ್ಯನಿರ್ವಹಿಸುತ್ತಿರುತ್ತವೆ. ಸುರಂಗ ಕೊರೆಯುವಾಗ ಹಲವು ಹಂತಗಳ ಕಾರ್ಯಗಳನ್ನು ಏಕ ಕಾಲಕ್ಕೆ ಯಂತ್ರಗಳನ್ನು ಬಳಸಿ ಭೂಮಿಯೊಳಗೆ ಕಾರ್ಯನಿರ್ವಹಿಸುವುದು ನಿಜಕ್ಕೂ ಸವಾಲಿನ ಕೆಲಸ. ಅದನ್ನು ಊರ್ಜಾ ಟಿಬಿಎಂ ಮೆಟ್ಟಿನಿಂತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.