ಬೆಂಗಳೂರು:ಸಚಿವ ಸಂಪುಟದಲ್ಲಿ ಖಾಲಿಯಿದ್ದ ಮೂರರಲ್ಲಿ ಎರಡು ಸ್ಥಾನ ತುಂಬಿರುವ ಮೈತ್ರಿ ಸರ್ಕಾರ 24 ಗಂಟೆ ಕಳೆದರೂ ಸಚಿವರಿಗೆ ಖಾತೆ ಹಂಚಿಕೆ ಮಾಡಿಲ್ಲ. ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದ ಸಚಿವರಿಗೆ ಬರುವ ಸೋಮವಾರದವರೆಗೂ ಖಾತೆ ಹಂಚಿಕೆ ಆಗಲ್ಲ ಎನ್ನುವ ಮಾಹಿತಿ ಇದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಸದ್ಯ ದಿಲ್ಲಿಯಲ್ಲಿದ್ದಾರೆ. ಇಂದು ಪ್ರಧಾನಿ ಭೇಟಿ ಹಾಗೂ ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ‍್ಳಲು ತೆರಳಿರುವ ಹಿನ್ನೆಲೆಯಲ್ಲಿ ಇಂದು ಆಗಬೇಕಿದ್ದ ಖಾತೆ ಹಂಚಿಕೆ ಸೋಮವಾರ ಆಗುವ ಸಾಧ್ಯತೆ ಇದೆ.
ಇನ್ನು ನಿರೀಕ್ಷೆಯಂತೆ ಕಾಂಗ್ರೆಸ್ ಕಡೆಯಿಂದ ಸಚಿವರಾಗಿರುವ ಆರ್.ಶಂಕರ್ಗೆ ಹಿಂದೆ ಅವರಿಗೆ ನೀಡಿದ್ದ ಅರಣ್ಯ ಖಾತೆ ಸಿಗುವುದು ಅನುಮಾನ. ಬದಲಾಗಿ ಸಚಿವರಾಗಿದ್ದ ಸಿ.ಎಸ್.ಶಿವಳ್ಳಿ ನಿಧನದಿಂದ ತೆರವಾಗಿರುವ ಪೌರಾಡಳಿತ ಖಾತೆ ಸಿಗುವುದು ಬಹುತೇಕ ಖಚಿತವಾಗಿದೆ. ಜೆಡಿಎಸ್ ಕಡೆಯಿಂದ ಸಚಿವರಾದ ನಾಗೇಶ್ಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಖಾತೆ ನೀಡಲು ನಿರ್ಧರಿಸಲಾಗಿದೆ. ಈ ಖಾತೆಯನ್ನು ಜೆಡಿಎಸ್-ಬಿಎಸ್ಪಿ ಬೆಂಬಲಿತ ಶಾಸಕ ಎನ್.ಮಹೇಶ್ ಅವರು ನಿಭಾಯಿಸಿದ್ದರು. ಅವರ ರಾಜೀನಾಮೆ ನಂತರ ಖಾತೆಯನ್ನು ಸಿ.ಎಂ ಎಚ್ಡಿಕೆ ಹೆಚ್ಚುವರಿಯಾಗಿ ವಹಿಸಿಕೊಂಡಿದ್ದರು. ಆದರೆ, ಇದೀಗ ಈ ಖಾತೆಯನ್ನು ನಾಗೇಶ್ಗೆ ನೀಡಲು ಮುಂದಾಗಿದ್ದಾರೆ.
ಅಬಕಾರಿಗೆ ಪಟ್ಟು ಎಚ್.ನಾಗೇಶ್ ಪಟ್ಟು?
ಮುಳಬಾಗಿಲಿನಿಂದ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿ ಸಚಿವ ಸ್ಥಾನ ಒಲಿದು ಬಂದಿರುವುದೇ ಭಾಗ್ಯ ಅಂದುಕೊಳ್ಳುವ ಸ್ಥಿತಿ ಇರುವಾಗ ಎಚ್.ನಾಗೇಶ್ ತಮಗೆ ನೀಡಲು ಉದ್ದೇಶಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆಯ ಬದಲಿಗೆ ಅಬಕಾರಿ ಖಾತೆಗೆ ಕಣ್ಣಿಟ್ಟಿದ್ದಾರೆ. ಆ ಖಾತೆಯೇ ಬೇಕೆಂದು ಪಟ್ಟು ಹಿಡಿದು ಕುಳಿತಿದ್ದಾರೆ ಎಂಬ ಮಾಹಿತಿ ಇದೆ.