ಕರ್ನಾಟಕ

karnataka

ETV Bharat / city

ವೈರ್​ನಿಂದ ಕತ್ತು ಬಿಗಿದು ಪ್ರಿಯತಮೆ ತಾಯಿಯ ಕೊಲೆ.. ಕೆಲ ಗಂಟೆಗಳಲ್ಲೇ ಆರೋಪಿ ಅರೆಸ್ಟ್​ - ಗೋವಿಂದರಾಜನಗರ ಠಾಣೆ

ಬೆಂಗಳೂರಿನ ಗೋವಿಂದರಾಜನಗರ ಠಾಣಾ ವ್ಯಾಪ್ತಿಯಲ್ಲಿ ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಿಯತಮೆಯ ತಾಯಿಯನ್ನು ಕೊಲೆಗೈದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ರಾಘವೇಂದ್ರ(35) ಬಂಧಿತ ಆರೋಪಿ.

murder case
ಆರೋಪಿ ಬಂಧನ

By

Published : May 7, 2022, 6:50 AM IST

ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ಪ್ರಿಯತಮೆಯ ತಾಯಿಯನ್ನು ಪ್ಲಾಸ್ಟಿಕ್ ವೈರ್‌ನಿಂದ ಕತ್ತು ಬಿಗಿದು ಕೊಲೆಗೈದಿರುವ ಘಟನೆ ನಗರದ ಗೋವಿಂದರಾಜನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೂಡಲಪಾಳ್ಯ ನಿವಾಸಿ ನಂಜಮ್ಮ (54) ಕೊಲೆಯಾದ ಮಹಿಳೆ. ಈ ಸಂಬಂಧ ಆಕೆಯ ಪುತ್ರಿಯ ಪ್ರಿಯಕರ ರಾಘವೇಂದ್ರ(35) ಎಂಬಾತನನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ.

ನಂಜಮ್ಮ ಮೂಡಲಪಾಳ್ಯದಲ್ಲಿ 7 ವರ್ಷಗಳಿಂದ ಒಬ್ಬರೇ ವಾಸವಾಗಿದ್ದು, ಮನೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಮತ್ತೊಂದೆಡೆ, ಪುತ್ರಿ ಸುಧಾಗೆ 12 ವರ್ಷಗಳ ಹಿಂದೆ ಶಿವರಾಮೇಗೌಡ ಎಂಬಾತನ ಜತೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಈ ಮಧ್ಯೆ ಕೌಟುಂಬಿಕ ವಿಚಾರಕ್ಕೆ ದಂಪತಿ ನಡುವೆ ಜಗಳವಾಗಿದ್ದು, ಆರು ವರ್ಷಗಳಿಂದ ಪ್ರತ್ಯೇಕವಾಗಿ ವಾಸವಾಗಿದ್ದಾರೆ.

ಘಟನೆ ಕುರಿತು ಮಾಹಿತಿ ನೀಡಿದ ಡಿಸಿಪಿ ಸಂಜೀವ್ ಪಾಟೀಲ್

ಈ ವೇಳೆ ಪಟ್ಟೆಗಾರಪಾಳ್ಯದಲ್ಲಿ ಗ್ಯಾರೇಜ್ ನಡೆಸುತ್ತಿರುವ ರಾಘವೇಂದ್ರನ ಪರಿಚಯವಾಗಿದ್ದು, ಮದುವೆಯಾಗುವುದಾಗಿ ಆರೋಪಿ ಸುಧಾಗೆ ಹೇಳಿದ್ದ. ವಿಚಾರ ತಿಳಿದ ನಂಜಮ್ಮ, ಪುತ್ರಿ ಮತ್ತು ಆಕೆಯ ಮಕ್ಕಳನ್ನು ಚೆನ್ನಾಗಿ ನೋಡಿಕೊಂಡರೆ ಮದುವೆ ಮಾಡುವುದಾಗಿ ಹೇಳಿದ್ದರು. ಹೀಗಾಗಿ, ಸುಧಾ ಜತೆ ಆರೋಪಿ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿ ಒಂದೇ ಮನೆಯಲ್ಲಿ ವಾಸವಾಗಿದ್ದರು. ಮಕ್ಕಳನ್ನು ರಾಘವೇಂದ್ರ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಆದರೆ, ಕೆಲ ತಿಂಗಳಿಂದ ಮದ್ಯ ವ್ಯಸನಿಯಾಗಿ ಅಮಲಿನಲ್ಲಿ ಪ್ರೇಯಸಿ ಮತ್ತು ಆಕೆಯ ಮಕ್ಕಳ ಮೇಲೆ ಹಲ್ಲೆ ನಡೆಸುತ್ತಿದ್ದ. ಇದರಿಂದ ಬೇಸತ್ತ ನಂಜಮ್ಮ, 10 ದಿನಗಳ ಹಿಂದೆ ಆತನನ್ನು ಮನೆಯಿಂದ ಹೊರಗೆ ಹಾಕಿದ್ದರು. ಆಕ್ರೋಶಗೊಂಡಿದ್ದ ಆರೋಪಿ, ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಮನೆ ಬಳಿ ಬಂದು ಗಲಾಟೆ ಮಾಡಿದ್ದ. ಮನೆಗೆ ಸೇರಿಸದಿರಲು ನೀನೇ ಕಾರಣ ಎಂದು ಗಲಾಟೆ ತೆಗೆದು, ಕೊಲೆಗೈಯುವುದಾಗಿ ಎಚ್ಚರಿಕೆ ನೀಡಿ ಹೋಗಿದ್ದ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ನಂಜಮ್ಮ ಒಬ್ಬರೇ ಮನೆಯಲ್ಲಿ ವಾಸವಾಗಿದ್ದನ್ನು ಖಚಿತಪಡಿಸಿಕೊಂಡ ಆರೋಪಿ, ತಡರಾತ್ರಿ ಮನೆಗೆ ಬಂದು ಪ್ಲಾಸ್ಟಿಕ್ ವೈರ್‌ನಿಂದ ನಂಜಮ್ಮನ ಕುತ್ತಿಗೆ ಬಿಗಿದು ಕೊಲೆಗೈದು ಬಳಿಕ ಮೈಮೇಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ.

ಮೊಮ್ಮಗ ಬಂದಾಗ ಪ್ರಕರಣ ಬೆಳಕಿಗೆ: ಶುಕ್ರವಾರ ಬೆಳಗ್ಗೆ ಮೊಮ್ಮಗ ಅಜ್ಜಿಯ ಮನೆಗೆ ಬಂದಾಗ ಬಾಗಿಲು ಹಾಕಿತ್ತು. ಹಲವು ಬಾರಿ ತಟ್ಟಿದರೂ ಯಾರು ತೆಗೆದಿಲ್ಲ. ಬಳಿಕ ತಾಯಿಯನ್ನು ಕರೆಸಿ, ಅಡುಗೆ ಮನೆಯ ಕಿಟಕಿಯಿಂದ ನೋಡಿದಾಗ ನಂಜಮ್ಮ ಮೃತಪಟ್ಟಿರುವುದು ಗೊತ್ತಾಗಿದೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ಕೆಲವೇ ಹೊತ್ತಿನಲ್ಲಿ ಬಂಧಿಸಿದ್ದಾರೆ.

ಇದನ್ನೂ ಓದಿ:ತುಮಕೂರು: ಶಸ್ತ್ರಚಿಕಿತ್ಸೆ ನಂತರ ಮಹಿಳೆಯರನ್ನು ನೆಲದ ಮೇಲೆ ಮಲಗಿಸಿದ ಆಸ್ಪತ್ರೆ ಸಿಬ್ಬಂದಿ

ABOUT THE AUTHOR

...view details