ಬೆಂಗಳೂರು:ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯ ಅವರ ಬೆಂಬಲಿಗರು ಲಿಂಗಾಯತ ಸಮುದಾಯಕ್ಕೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ನಾನು ಕೂಡ ನಿಮ್ಮ ಜಾತಿಯವನೇ. ಆದರೆ, ಜಾತಿ ನಿಂದನೆ ಒಳ್ಳೆಯದಲ್ಲ. ಅದನ್ನು ನಿಮ್ಮ ಅಭ್ಯರ್ಥಿಗೆ ಮನವರಿಕೆ ಮಾಡಿಕೊಡಿ ಎಂದು ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗಿರೀಶ್ ಕೆ.ನಾಶಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಪಾಲಯ್ಯ ಅವರಿಗೆ ಸೋಲಿನ ಭೀತಿ ಉಂಟಾಗಿದೆ. ಹಾಗಾಗಿ ಅವರು ಜಾತಿ ನಿಂದನೆ ಮಾಡಲು ಹೊರಟಿದ್ದಾರೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ನಾವು ಮನೆಮನೆಗೆ ಹೋಗಿ ಪ್ರಚಾರ ಮಾಡುತ್ತಿದ್ದೇವೆ. ಬಿಜೆಪಿ ಅಬ್ಬರದ ಪ್ರಚಾರ ನಡೆಸುತ್ತಿದ್ದರೂ ಮತದಾರರ ಒಲವು ಜೆಡಿಎಸ್ ಪರವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗಿರೀಶ್ ಕೆ.ನಾಶಿ ಯಡಿಯೂರಪ್ಪ ಅವರು ಲಿಂಗಾಯತರು. ನನ್ನನ್ನು ನಿಂದಿಸಿದರೆ ಯಡಿಯೂರಪ್ಪ ಅವರನ್ನು ನಿಂದಿಸಿದಂತೆ. ಜೊತೆಗೆ ಲಿಂಗಾಯತ ಜನಾಂಗಕ್ಕೆ ಅವಮಾನ ಮಾಡಿದ ಹಾಗೆ ಎಂದು ಹೇಳಿದರು.
ಕೆ.ಗೋಪಾಲಯ್ಯ ಅವರು ನಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಅವರು ಕ್ಷೇತ್ರದಲ್ಲೆಲ್ಲೂ ಪ್ರಚಾರ ಮಾಡುತ್ತಿಲ್ಲ. ಎಲ್ಲೋ ಒಂದೆಡೆ ಕೂತು ಹಣದ ಹೊಳೆ ಹರಿಸುತ್ತಿದ್ದಾರೆ ಎಂದು ಗಿರೀಶ್ ದೂರಿದರು. ನಾನು ಅಕೌಂಟೆಂಟ್ ಆಗಿದ್ದೆ. ನನ್ನಿಂದ ಹಣ ನೀಡಲು ಸಾಧ್ಯವಾಗುತ್ತಿಲ್ಲ. ಚುನಾವಣೆ ಅಂದರೆ ಕ್ರೀಡೆಯಂತೆ. ಅದನ್ನು ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳಬೇಕು. ಗೂಂಡಾಗಿರಿ ಮೂಲಕ ಚುನಾವಣೆ ಮಾಡಬಾರದು ಆಕ್ರೋಶ ವ್ಯಕ್ತಪಡಿಸಿದ್ರು.
ಜೆಡಿಎಸ್ ಬೆಂಗಳೂರು ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಮಾತನಾಡಿ, ಮಹಾಲಕ್ಷ್ಮಿ ಲೇಔಟ್ನಲ್ಲಿ ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ. ಇಷ್ಟಾದರೂ ಚುನಾವಣಾ ಆಯೋಗ ಕಣ್ಣುಮುಚ್ಚಿ ಕೂತಿದೆ. ಅಕ್ರಮದ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.