ಕರ್ನಾಟಕ

karnataka

ETV Bharat / city

'ದಿ ಕಾಶ್ಮೀರಿ ಫೈಲ್ಸ್‌' ಸಿನಿಮಾ ವೀಕ್ಷಣೆಗೆ ಆಹ್ವಾನ ವಿಚಾರ; ಪರಿಷತ್‌ನಲ್ಲಿ ಗದ್ದಲ, ಕಲಾಪಕ್ಕೆ ಅಡ್ಡಿ - ದಿ ಕಾಶ್ಮೀರಿ ಫೈಲ್ಸ್‌ ಸಿನಿಮಾ ವೀಕ್ಷಣೆಗೆ ಆಹ್ವಾನ ವಿಚಾರ

1998ರಲ್ಲಿ ನಡೆದಿದ್ದ ವಂಧಮಾ ಹತ್ಯಾಂಕಾಡ ಘಟನೆ ಆಧರಿಸಿ ಚಿತ್ರೀಕರಿಸಿರುವ ದಿ ಕಾಶ್ಮೀರಿ ಫೈಲ್ಸ್‌ ಸಿನಿಮಾ ದೇಶದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಇದೇ ಸಿನಿಮಾ ವೀಕ್ಷಣೆ ಮಾಡುವ ಬಗ್ಗೆ ರಾಜ್ಯ ವಿಧಾನ ಪರಿಷತ್‌ನಲ್ಲಿಂದು ಆಡಳಿತ ಮತ್ತು ವಿಪಕ್ಷಗಳ ನಡುವೆ ವಾಕ್ಸಮರ ನಡೆದಿದೆ.

the kashmir files Cinema issue; Uproar in the Karnataka Legislative Council
'ದಿ ಕಾಶ್ಮೀರಿ ಫೈಲ್ಸ್‌' ಸಿನಿಮಾ ವೀಕ್ಷಣೆಗೆ ಆಹ್ವಾನ ವಿಚಾರ; ಪರಿಷತ್‌ನಲ್ಲಿ ಗದ್ದಲ, ಕಲಾಪಕ್ಕೆ ಅಡ್ಡಿ

By

Published : Mar 15, 2022, 2:30 PM IST

ಬೆಂಗಳೂರು: ದಿ ಕಾಶ್ಮೀರಿ ಫೈಲ್ಸ್‌ ಸಿನಿಮಾ ವೀಕ್ಷಣೆಗೆ ಆಹ್ವಾನ ವಿಚಾರ ಸಂಬಂಧ ವಿಧಾನ ಪರಿಷತ್‌ನಲ್ಲಿ ದೊಡ್ಡ ಗದ್ದಲದ ವಾತಾವರಣಕ್ಕೆ ಕಾರಣವಾಯಿತು. ಕಲಾಪ ಆರಂಭವಾಗುತ್ತಿದ್ದಂತೆ ಶಾಸಕರನ್ನು ಆಹ್ವಾನಿಸಿ ಪರಿಷತ್‌ನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಪ್ರಕಟಣೆ ನೀಡಿದರು.

ಕಾಶ್ಮೀರ್ ಫೈಲ್ಸ್ ಸಿನಿಮಾ ವೀಕ್ಷಣೆ ವಿಚಾರ ವಾಪಸ್ ಪಡೆಯುವಂತೆ ಕಾಂಗ್ರೆಸ್ ಗದ್ದಲ ನಡೆಸಿತು. ಫರ್ಜಾನಾ ಮತ್ತು ವಾಟರ್ ಅಂತ ಎರಡು ಸಿನಿಮಾ ಇವೆ ಅವನ್ನೂ ತೋರಿಸಿ ಎಂದ ಹರಿಪ್ರಸಾದ್, ಸರ್ಕಾರ ಯಾಕೆ ಬಲವಂತವಾಗಿ ಸಿನಿಮಾ ತೋರಿಸುವುದಕ್ಕೆ ಹೊರಟಿದೆ ಎಂದು ಪ್ರಶ್ನಿಸಿದರು.

ಬಜೆಟ್ ಚರ್ಚೆ ಬಿಟ್ಟು ಸಿನಿಮಾ ಯಾಕೆ ನೋಡಬೇಕು ಎಂದು ಸಲೀಂ ಅಹಮದ್ ಪ್ರಶ್ನೆ ಎತ್ತಿದರು. ಆಗ ಮಧ್ಯಪ್ರವೇಶಿಸಿದ ಸಚಿವ ಎಸ್‌ಟಿ ಸೋಮಶೇಖರ್‌, ಯಾರಿಗೂ ಕಡ್ಡಾಯ ಇಲ್ಲ, ಇಷ್ಟ ಇದ್ದರೆ ನೋಡಿ ಎಂದರು. ಆಗ ಕಾಂಗ್ರೆಸ್, ಬಿಜೆಪಿ ಸದಸ್ಯರ ನಡುವೆ ಸಿನಿಮಾ ವಿಚಾರಕ್ಕೆ ಗದ್ದಲ ಉಂಟಾಯಿತು. ಬಾಬೂ ಭಜರಂಗಿ ಅಂತ ಸಿನಿಮಾ ತೋರಿಸಿ. ಆ ತರ ದ್ವೇಷ ಭಾವನೆ ನಿಮ್ಮಲ್ಲಿರೋದು ನಮಗೂ ಗೊತ್ತಿದೆ. ದೇಶದಲ್ಲಿ ಅಸೂಯೆ ಮೂಡಿಸುವುದಕ್ಕೆ ಮಾಡ್ತಿದ್ದಾರೆ. ಗುಜರಾತ್ ಫೈಲೂ ತೋರಿಸಲಿ. ಪಂಚರಾಜ್ಯ ಚುನಾವಣೆ ಏನಾಯ್ತು ಗೊತ್ತಿದೆ. ಸದನದಲ್ಲಿ ಮಾಡಿದ ಘೋಷಣೆ ವಾಪಸ್ ಪಡೆಯಬೇಕು ಎಂದು ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದು ಘೋಷಣೆ ಕೂಗಿದರು.

ಬಾವಿಗಿಳಿದು ಧರಣಿ:ಪ್ರಕಟಣೆ ವಾಪಸ್ ಪಡೆಯಬೇಕು ಎಂದು ಕಾಂಗ್ರೆಸ್ ಸದಸ್ಯರು ಒತ್ತಾಯಿಸಿ ಧರಣಿ ನಡೆಸಿ ಪರಿಷತ್ ಬಾವಿಗಿಳಿದರು. ನಿಮ್ಮ ಆರ್ಭಟ ನಡೆಯೋದಿಲ್ಲ ಎಂದು ಬಿಜೆಪಿ ಸದಸ್ಯರ ಗದ್ದಲ ಮಾಡಿದರು. ಪ್ರತಿಪಕ್ಷ ನಾಯಕ ಹರಿಪ್ರಸಾದ್ ಮಾತನಾಡಿ, ನಾವು ಯಾವ ಸಿನಿಮಾ ನೋಡಬೇಕು ಅಂತ ಸದನದಲ್ಲಿ ಹೇಳೋ ಹಾಗಿಲ್ಲ. ಕೆಲವರು ಸದನದಲ್ಲಿ ಬ್ಲ್ಯೂ ಫಿಲಂ ಸಹ ನೋಡಿದ್ದಾರೆ. ನಾವೂ ಹಾಗಾದ್ರೆ ಬ್ಲ್ಯೂ ಫಿಲಂ ನೋಡಬೇಕಾ? ಸರ್ಕಾರ ಪಿಚ್ಚರ್ ತೋರಿಸೋದಕ್ಕೆ ಇದೆಯಾ? ಪೀಠದಿಂದ ಯಾಕೆ ಇದನ್ನು ಹೇಳಿಸ್ತೀರಾ? ಎಂದು ಕೇಳಿದರು.

ಪಂಚರಾಜ್ಯ ಫಲಿತಾಂಶ ಪ್ರಸ್ತಾಪ:ಪರಿಷತ್‌ನಲ್ಲಿ ಗಲಾಟೆ ವೇಳೆ ಪಂಚರಾಜ್ಯ ಚುನಾವಣೆ ಫಲಿತಾಂಶ ಪ್ರಸ್ತಾಪ ಮಾಡಿದ ಸಚಿವ ಬೈರತಿ ಬಸವರಾಜ್ ವಿರುದ್ಧ ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಪೊರೇಟ್, ಎಂಎಲ್‌ಎ ಆಗೋಕೆ ಕಾಂಗ್ರೆಸ್ ಬೇಕು. ಮಂತ್ರಿ ಆಗೋಕೆ ಬಿಜೆಪಿಗೆ ಹೋದ್ರು. ನಿಮ್ ಬಗ್ಗೆ ನಮಗೆ ಗೊತ್ತು ಕುಳಿತುಕೊಳ್ಳಿ ಎಂದರು. ಹರಿಪ್ರಸಾದ್ ಮಾತಿಗೆ ಬೈರತಿ ಸಿಟ್ಟಾಗಿ, ನ್ಯಾಯಯುತವಾಗಿ ಗೆದ್ದು ಬಂದಿದ್ದೇವೆ. ಕುಳಿತುಕೊಳ್ಳಿ ನೀವು ಏನು ಅಂತಾ ಗೊತ್ತು ಎಂದು ಆಕ್ರೋಶ ಹೊರ ಹಾಕಿದರು. ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು.

ಹರಿಪ್ರಸಾದ್ ಮಾತು ಮುಂದುವರಿಸಿ, ಪಾಕಿಸ್ತಾನಕ್ಕೆ ಬರ್ತ್‌ಡೇಗೆ ಹೋಗೋ ನೀತಿಗೆಟ್ಟ ಪ್ರಧಾನಿ ನಿಮ್ಮವರು ಎಂದರು. ಸಭಾಪತಿ ಹೊರಟ್ಟಿ ಮಾತನಾಡಿ, ಸರ್ಕಾರ ಕಳಿಸಿದ ಪ್ರಕಟಣೆಯನ್ನು ನಾನು ಓದಿದ್ದೇನೆ, ಇಷ್ಟ ಇದ್ದವರು ಹೋಗಿ ಇಲ್ಲದವರು ಬಿಡಿ ಎಂದರು. ಹರಿಪ್ರಸಾದ್ ಮಾತನಾಡಿ, ಸಭಾಪತಿ ನಿಷ್ಪಕ್ಷಪಾತ ಆಗಿರಬೇಕು. ಈ ಪ್ರಕಟಣೆ ನೀವು ಯಾಕೆ ಹೊರಡಿಸ್ತೀರಿ? ಎಂದಾಗ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಹರಿಪ್ರಸಾದ್ ತಾಳ್ಮೆ ತಗೊಳ್ಳಿ ಎಂದರು. ಗದ್ದಲ ಕಡಿಮೆಯಾಗದ ಹಿನ್ನೆಲೆಯಲ್ಲಿ ಪರಿಷತ್ ಕಲಾಪ 10 ನಿಮಿಷ ಮುಂದೂಡಲಾಯಿತು.

ಪರಿಷತ್ ಕಲಾಪ ಮತ್ತೆ ಪ್ರಾರಂಭವಾದಾಗ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ವೀಕ್ಷಣೆ ಗದ್ದಲ ವಿಚಾರವಾಗಿ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಕಾಶ್ಮೀರಿ ಪಂಡಿತರ ಕುರಿತ ಸಿನಿಮಾ ಇದು. ಇಷ್ಟ ಇದ್ದವರು ನೋಡಬಹುದು, ಇಲ್ಲದವರು ಸುಮ್ಮನಿರಬಹುದು ಎಂದರು. ಆಗ ಹರಿಪ್ರಸಾದ್, ಆ ಸಿನಿಮಾದಲ್ಲಿ ಬರೀ ಸುಳ್ಳಿದೆ, 89 ಜನ ಮಾತ್ರ ಸತ್ತಿರುವುದು ಅಲ್ಲಿ, ಆದರೆ, ಸಿನಿಮಾದಲ್ಲಿ ಸಾವಿರಾರು ಮಂದಿ ಸತ್ತಂತೆ ತೋರಿಸಿದ್ದಾರೆ ಎಂದರು. ಸಾಕಷ್ಟು ಸಮಯ ಗದ್ದಲ ನಡೆದ ಬಳಿಕ ಸಭಾಪತಿಗಳು ಪರಿಸ್ಥಿತಿ ತಿಳಿಗೊಳಿಸಿದರು.

ಇದನ್ನೂ ಓದಿ:1998 ವಂಧಮಾ ಹತ್ಯಾಕಾಂಡ: ಆ ರಾತ್ರಿ ಮುಸುಕುಧಾರಿಗಳಿಂದ ನಡೆದಿತ್ತು 23 ಕಾಶ್ಮೀರಿ ಪಂಡಿತರ ನರಮೇಧ!

For All Latest Updates

ABOUT THE AUTHOR

...view details