ಕರ್ನಾಟಕ

karnataka

ETV Bharat / city

ಕಾಂಗ್ರೆಸ್ ನಾಯಕರಲ್ಲಿ ಆತಂಕ ಹೆಚ್ಚಿಸಿದ ಜೆಡಿಎಸ್ ನಿಲುವು - ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ

ಕಾಂಗ್ರೆಸ್ ಪಕ್ಷ ತಾನು ಕಳೆದುಕೊಂಡ ಬಸವಕಲ್ಯಾಣ ಹಾಗೂ ಮಸ್ಕಿ ಕ್ಷೇತ್ರವನ್ನು ಮರಳಿ ವಶ ಮಾಡಿಕೊಳ್ಳುವ ಯತ್ನಕ್ಕೆ ಜೆಡಿಎಸ್ ಅಡ್ಡಗಾಲಾಗಿದೆ ಎನ್ನಲಾಗಿದೆ. ಆಡಳಿತ ಪಕ್ಷದ ಪರ ಜನರ ಒಲವು ಗೋಚರಿಸುತ್ತಿರುವ ಹಿನ್ನೆಲೆ ಪ್ರಮುಖ ಪ್ರಾದೇಶಿಕ ಪಕ್ಷ ಜೆಡಿಎಸ್, ತನ್ನ ಅಭ್ಯರ್ಥಿ ಕಣಕ್ಕಿಳಿಸದಿರುವ ನಿರ್ಧಾರ ಕೈಗೊಳ್ಳಲು ಮುಂದಾಗಿದೆ ಎನ್ನಲಾಗಿದೆ.

JDS
JDS

By

Published : Nov 26, 2020, 12:06 PM IST

ಬೆಂಗಳೂರು: ತಾವು ಕಳೆದುಕೊಂಡಿರುವ ಕ್ಷೇತ್ರದಲ್ಲಿ ಕೆಲವನ್ನಾದರೂ ಗೆಲ್ಲೋಣ ಎಂದು ಕೊಳ್ಳುತ್ತಿರುವ ಕಾಂಗ್ರೆಸ್​ ಪಕ್ಷಕ್ಕೆ ಜೆಡಿಎಸ್ ಮತ್ತಷ್ಟು ಆತಂಕ ಉಂಟುಮಾಡಿದೆ. ಆಗಾಗ ಪಕ್ಷ ನಿಷ್ಠೆ ಬದಲಿಸುವ ಜೆಡಿಎಸ್, ಸದ್ಯ ಕಾಂಗ್ರೆಸ್ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಒಂದೂವರೆ ವರ್ಷದ ಹಿಂದೆ ಮೈತ್ರಿ ಮಾಡಿಕೊಂಡು ಸಿಎಂ ಸ್ಥಾನವನ್ನೇ ಧಾರೆ ಎರೆದಿದ್ದ ಕಾಂಗ್ರೆಸ್​ಗೆ ಜೆಡಿಎಸ್ ಮುಟ್ಟಿನೋಡಿಕೊಳ್ಳುವಂತಹ ಪೆಟ್ಟು ನೀಡಿದೆ. ಕಾಂಗ್ರೆಸ್ ಪಕ್ಷ ತಾನು ಕಳೆದುಕೊಂಡ ಬಸವಕಲ್ಯಾಣ ಹಾಗೂ ಮಸ್ಕಿ ಕ್ಷೇತ್ರವನ್ನು ಮರಳಿ ಕೈವಶ ಮಾಡಿಕೊಳ್ಳುವ ಯತ್ನಕ್ಕೆ ಜೆಡಿಎಸ್ ಅಡ್ಡಗಾಲಾಗಿದೆ. ಎರಡೂ ಕ್ಷೇತ್ರದ ಉಪ ಚುನಾವಣೆ ದಿನಾಂಕ ಘೋಷಣೆಗೆ ರಾಜಕೀಯ ಪಕ್ಷಗಳು ಕಾಯುತ್ತಿದ್ದು, ಪ್ರಮುಖ ಪ್ರಾದೇಶಿಕ ಪಕ್ಷವಾದ ಜೆಡಿಎಸ್, ತಾವು ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಯೋಚಿಸಿ ನಿರ್ಧರಿಸುತ್ತೇವೆ. ಕಣಕ್ಕಿಳಿಸುವುದರಿಂದ ನಷ್ಟವೇ ಹೆಚ್ಚು ಎನ್ನುವ ನಿಟ್ಟಿನಲ್ಲಿ ಹೇಳಿಕೆ ನೀಡುತ್ತಿದೆ.

ಹೌದು, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರೇ ಇಂತಹ ಹೇಳಿಕೆ ನೀಡಿ ಕಾಂಗ್ರೆಸ್ ನಾಯಕರ ರಕ್ತದೊತ್ತಡ ಹೆಚ್ಚಿಸಿದ್ದಾರೆ. ಸದ್ಯ ನಡೆಯುತ್ತಿರುವ ಎಲ್ಲ ಉಪಚುನಾವಣೆಗಳಲ್ಲಿ ಅನುಕಂಪ, ಹಿಂದೆ ಕಾರ್ಯನಿರ್ವಹಿಸಿದ್ದ ಶಾಸಕರ ಮೇಲಿನ ಪ್ರೀತಿ, ಪರಿಚಿತ ನಾಯಕ, ಪಕ್ಷದ ಮೇಲಿನ ಪ್ರೀತಿ ಯಾವುದು ಮತದಾರರಲ್ಲಿ ಗೋಚರಿಸುತ್ತಿಲ್ಲ. ಕೇವಲ ಆಡಳಿತ ಪಕ್ಷದ ಪರ ಮತದಾರರ ಒಲವು ಗೋಚರಿಸುತ್ತಿದೆ. ಅಲ್ಲದೇ ಉಪಚುನಾವಣೆಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹಣ ಚಲಾವಣೆ, ಆಮಿಷಗಳು ಸರ್ಕಾರದ ಕಡೆಯಿಂದ ಸಿಗುತ್ತದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ.

ಇದನ್ನೂ ಓದಿ:ಸತತ ಸೋಲಿನ ಕಹಿಯಿಂದ ಎಚ್ಚೆತ್ತು ಪಕ್ಷ ಬಲವರ್ಧನೆಗೆ ಮುಂದಾದ ಜೆಡಿಎಸ್​​​

ಆಡಳಿತ ಪಕ್ಷದ ಪರ ಜನರ ಒಲವು ಗೋಚರಿಸುತ್ತಿರುವ ಹಿನ್ನೆಲೆ ಪ್ರಮುಖ ಪ್ರಾದೇಶಿಕ ಪಕ್ಷ ಜೆಡಿಎಸ್, ಅಭ್ಯರ್ಥಿ ಕಣಕ್ಕಿಳಿಸದಿರುವ ನಿರ್ಧಾರ ಕೈಗೊಳ್ಳಲು ಮುಂದಾಗಿದೆ ಎನ್ನಲಾಗಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ನುಂಗಲಾಗದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಒಂದಿಷ್ಟು ಮತಗಳ ವಿಭಜನೆಯಾಗಿ ಆಡಳಿತ ಪಕ್ಷ ಬಿಜೆಪಿಗೆ ಪೈಪೋಟಿ ನೀಡಬಹುದು ಎಂದು ಕೊಂಡಿದ್ದ ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ನಿರ್ಧಾರ ಆತಂಕ ಉಂಟುಮಾಡಿದೆ.

ಗೆಲುವಿನ ಉತ್ಸಾಹದಲ್ಲಿರುವ ಬಿಜೆಪಿಗೆ ಗೆಲುವು ಸುಲಭವಾಗಲಿದೆ ಎಂಬ ದುಗುಡ ಕಾಂಗ್ರೆಸ್ ಪಾಳಯದಲ್ಲಿ ಆರಂಭವಾಗಿದೆ. ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸದಿದ್ದರೆ ಅದರ ಲಾಭ ಬಿಜೆಪಿಗೆ ಆಗಲಿದೆ. ಜೆಡಿಎಸ್ ಮತ ಬಿಜೆಪಿ ಕಡೆ ವಾಲಲಿದೆ ಎನ್ನುವ ತಲೆಬಿಸಿ ಕಾಂಗ್ರೆಸ್​ನದ್ದಾಗಿದೆ. ಈಗಾಗಲೇ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಒಂದಿಷ್ಟು ಅನುದಾನ ಬಿಡುಗಡೆ, 15 ಸಾವಿರ ಮನೆಗಳನ್ನು ನಿರ್ಮಿಸಿಕೊಡುವ ಭರವಸೆ, ಲಿಂಗಾಯತ - ವೀರಶೈವ ಅಭಿವೃದ್ಧಿ ನಿಗಮ, ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಭರವಸೆ ನೀಡಿ ಅರ್ಧ ಗೆದ್ದಿದ್ದಾರೆ. ಇದರಿಂದ ಮಸ್ಕಿಯಲ್ಲಿ ಸೋಲಿನ ಸೇಡು ತೀರಿಸಿಕೊಳ್ಳುವ ಹಾಗೂ ಬಸವಕಲ್ಯಾಣದಲ್ಲಿ ಅನುಕಂಪದ ಅಲೆ ಮೇಲೆ ಗೆಲ್ಲುವ ಆಶಯ ಹೊತ್ತಿದ್ದ ಕಾಂಗ್ರೆಸ್​ಗೆ ಭ್ರಮನಿರಸನವಾಗಿದೆ.

ಇನ್ನು ಜೆಡಿಎಸ್ ಪಕ್ಷಕ್ಕೆ ಮಸ್ಕಿಯಲ್ಲಿ ಗೆಲ್ಲುವ ನಿರೀಕ್ಷೆ ಇಲ್ಲವಾಗಿದ್ದರೂ, ಬಸವಕಲ್ಯಾಣದಲ್ಲಿ ಒಂದಿಷ್ಟು ಮತ ಬ್ಯಾಂಕ್ ಇತ್ತು. ಆದರೆ, ಶಿರಾದಲ್ಲಿ ಜನ ಅನುಕಂಪಕ್ಕೂ ಬೆಲೆ ಕೊಡದಿರುವುದು, ರಾಜರಾಜೇಶ್ವರಿನಗರದಲ್ಲಿ ಅಭ್ಯರ್ಥಿ ಠೇವಣಿ ಸಹ ಗಳಿಸದಿರುವುದು ಜೆಡಿಎಸ್ ಆಂತರಿಕ ಒತ್ತಡ ಹೆಚ್ಚಿಸಿದೆ. ಅನಗತ್ಯವಾಗಿ ಚುನಾವಣೆಗೆ ವೆಚ್ಚ ಮಾಡುವ ಬದಲು ಮುಂದಿನ ವಿಧಾನಸಭೆ ಚುನಾವಣೆಯತ್ತ ಗಮನ ಹರಿಸೋಣ ಎನ್ನುವ ನಿಲುವಿಗೆ ಬಂದಿದೆ.

ಬಸವಕಲ್ಯಾಣದಲ್ಲಿ ಕಳೆದ ಮೂರು ವರ್ಷದಲ್ಲಿ ಜೆಡಿಎಸ್ ಸಾಧನೆ ಸಮಾಧಾನಕರವಾಗಿತ್ತು. 2008 ರಲ್ಲಿ ಮಲ್ಲಿಕಾರ್ಜುನ ಎಸ್ ಖೂಬಾ ಶೇ.22.36 ರಷ್ಟು ಅಂದರೆ 23,905 ಮತ ಗಳಿಸಿದ್ದರು. 2013ರಲ್ಲಿ ಶೇ.29.72ರಷ್ಟು ಅಂದರೆ 37,496 ಮತ ಪಡೆದು ಜೆಡಿಎಸ್ ಶಾಸಕರಾಗಿ ಆಯ್ಕೆಯಾಗಿದ್ದರು. 2018ರಲ್ಲಿ ಅವರು ಬಿಜೆಪಿ ಸೇರಿದ್ದರಿಂದ ಜೆಡಿಎಸ್ ಮರಾಠರ ಮತ ನಂಬಿ ಪಿಜಿಆರ್ ಸಿಂಧ್ಯಾ ಅವರನ್ನು ಕಣಕ್ಕಿಳಿಸಿತ್ತು. ಅವರು ಶೇ. 21.62 ರಷ್ಟು ಅಂದರೆ 31,414 ಮತ ಗಳಿಸಿದ್ದರು. ಕಳೆದ ಮೂರು ಚುನಾವಣೆಯಲ್ಲಿ ಮೊದಲ ಮೂರು ಸ್ಥಾನಗಳನ್ನೇ ಹೊಂದಿದ್ದರೂ, ಈ ಸಾರಿ ಜೆಡಿಎಸ್ ಹಿಂದೇಟು ಹಾಕಿದೆ.

ಇನ್ನು ಮಸ್ಕಿಯಲ್ಲಿ ಜೆಡಿಎಸ್ ಲೆಕ್ಕಕ್ಕಿಲ್ಲ. 2008ರಲ್ಲಿ ಶೇ.10ರಷ್ಟು ಮತಗಳಿಸಿದ್ದ ಪಕ್ಷ, 2013ರಲ್ಲಿ ಶೇ.3 ಕ್ಕೆ ಕುಸಿದಿತ್ತು. 2018ರಲ್ಲಿ ಶೇ.8ಕ್ಕೆ ಏರಿತ್ತು. ಇಲ್ಲಿನ ದಯನೀಯ ಸ್ಥಿತಿ ಹಿನ್ನೆಲೆ ಚುನಾವಣೆಯಿಂದ ಹಿಂದೆ ಸರಿಯಲು ಜೆಡಿಎಸ್ ತೀರ್ಮಾನಿಸಿದ್ದು, ಜೆಡಿಎಸ್ ನಿಲವು ನೇರವಾಗಿ ಬಿಜೆಪಿಗೆ ಲಾಭವಾಗುವ ಸಾಧ್ಯತೆ ಹೆಚ್ಚಿರುವುದರಿಂದ ಕಾಂಗ್ರೆಸ್ ಪಾಳಯದಲ್ಲಿ ತಲೆಬಿಸಿ ಹೆಚ್ಚಾಗಿದೆ. ಮುಂಬರುವ ಉಪಚುನಾವಣೆಯನ್ನಾದರೂ ಗೆದ್ದು ಮುಖಭಂಗ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​​​ಗೆ ಜೆಡಿಎಸ್ ಈ ನಿಲುವು ಮತ್ತಷ್ಟು ಆತಂಕವನ್ನುಂಟು ಮಾಡಿದೆ.

ABOUT THE AUTHOR

...view details