ಬೆಂಗಳೂರು: ಐಟಿ-ಬಿಟಿ ಕ್ಷೇತ್ರದ ಜನತೆ ಅಪಾರ್ಟ್ಮೆಂಟ್ಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದೆ. ಐಟಿ-ಬಿಟಿ ಕ್ಷೇತ್ರವಾದ ಮಹದೇವಪುರದಲ್ಲಿ ಆದರೆ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ ಎಂದು ಸಚಿವ ಬೈರತಿ ಬಸವರಾಜ್ ಮಾಹಿತಿ ನೀಡಿದರು.
ಬೆಂಗಳೂರಿನ ಮಹದೇವಪುರ ವಲಯದ ಕೊರೊನಾ ನಿಯಂತ್ರಣ ಸಭೆಯಲ್ಲಿ ಮಾತನಾಡಿದ ಅವರು ಹೊರರಾಜ್ಯದ ಅತಿ ಹೆಚ್ಚು ಜನ ನೆಲೆಸಿರುವ ಮಹದೇವಪುರ ವಲಯದಲ್ಲಿ ದಿನಕ್ಕೆ ಎರಡು ಸಾವಿರಕ್ಕೂ ಹೆಚ್ಚು ಪ್ರಕರಣಗಳು ಕಂಡುಬರುತ್ತಿವೆ. ಅಲ್ಲಿನ ಜನರು ಆತಂಕದಲ್ಲಿದ್ದಾರೆ ಎಂದರು.
ಯಾವುದೇ ಅಪಾರ್ಟ್ಮೆಂಟ್ನಲ್ಲಿ 5ಕ್ಕಿಂತ ಹೆಚ್ಚು ಪ್ರಕರಣಗಳು ಕಂಡುಬಂದರೆ ಮುಲಾಜಿಲ್ಲದೆ ಅಂತಹ ಅಪಾರ್ಟ್ಮೆಂಟ್ಗಳನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲು ಇವತ್ತಿನಿಂದಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಕೋವಿಡ್ ಪರಿಹಾರ ಕಾರ್ಯದಲ್ಲಿ ಕ್ಯಾಪ್ಟನ್ ಕೊಹ್ಲಿ ಬ್ಯುಸಿ
ಮಹದೇವಪುರ ವಲಯದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಅಪಾರ್ಟ್ಮೆಂಟ್ಗಳು ತಲೆಯೆತ್ತಿದ್ದು, ಇದರಲ್ಲಿ ವಾಸಿಸುವ ಐಟಿ-ಬಿಟಿ ಕಂಪನಿಯ ಅಧಿಕಾರಿಗಳು ಬೇರೆ ಬೇರೆ ರಾಜ್ಯಗಳಿಗೆ ಕೆಲಸದ ನಿಮಿತ್ತ ಹೋಗಿ ಬರುವುದರಿಂದ ಅವರಲ್ಲಿ ಹೆಚ್ಚು ಸೋಂಕು ಪತ್ತೆಯಾಗುತ್ತಿದೆ.
ಅಪಾರ್ಟ್ಮೆಂಟ್ಗಳಲ್ಲಿ ಮನೆಗಳು ಒಂದಕ್ಕೊಂದು ಸಮೀಪವಿರುವುದರಿಂದ ಬೇರೆಯವರಿಗೆ ಸೋಂಕು ಬೇಗನೆ ಹರಡುತ್ತಿದೆ. ಇದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಬೈರತಿ ಬಸವರಾಜ್ ಹೇಳಿದರು.
ಈ ಸಭೆಯಲ್ಲಿ ಸಚಿವ ಅರವಿಂದ್ ಲಿಂಬಾವಳಿ ಮತ್ತು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ದೇವರಾಜ್ ಕೂಡಾ ಭಾಗವಹಿಸಿದ್ದರು. ಅಪಾರ್ಟ್ಮೆಂಟ್ಗಳಲ್ಲಿ ಸಮಸ್ಯೆ ಕಂಡುಬಂದರೆ ಅಥವಾ ಸೋಂಕಿತರ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.