ಬೆಂಗಳೂರು :ದರೋಡೆ ಮಾಡಲು ಯತ್ನಿಸಿದ ಆರೋಪ ಪ್ರಕರಣದಲ್ಲಿ 2 ವರ್ಷಕ್ಕೂ ಹೆಚ್ಚು ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗೆ ನೀಡಿದ್ದ ಜಾಮೀನು ರದ್ದು ಕೋರಿ ಅರ್ಜಿ ಸಲ್ಲಿಸಿದ್ದ ನಗರದ ರೈಲ್ವೆ ಪೊಲೀಸರಿಗೆ ಹೈಕೋರ್ಟ್ 1 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಪ್ರಕರಣದ ಆರೋಪಿ ಸ್ಟೀಫನ್‌ಗೆ ನಗರದ 52ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ನೀಡಿದ್ದ ಜಾಮೀನು ರದ್ದುಗೊಳಿಸುವಂತೆ ಕೋರಿ ರೈಲ್ವೆ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ನ್ಯಾ. ಹೆಚ್ ಪಿ ಸಂದೇಶ್ ಅವರಿದ್ದ ಪೀಠ, ಈ ಆದೇಶ ಹೊರಡಿಸಿದೆ.
ಪೀಠ ತನ್ನ ತೀರ್ಪಿನಲ್ಲಿ 2018ರ ಆಗಸ್ಟ್ 7ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ. ತನಿಖೆ ನಡೆಸಿದ್ದ ಪೊಲೀಸರು 2018ರ ಡಿಸೆಂಬರ್ 20ರಂದು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದಾರೆ. ಆರೋಪಿ 2 ವರ್ಷದಿಂದ ನ್ಯಾಯಾಂಗ ಬಂಧನದಲ್ಲಿದ್ದ.
ಆರೋಪ ಸಾಬೀತುಪಡಿಸಲು ಸೂಕ್ತ ದಾಖಲೆಗಳಿಲ್ಲ ಎಂಬ ಕಾರಣಕ್ಕೆ ವಿಚಾರಣಾ ನ್ಯಾಯಾಲಯ 2020ರ ಅಕ್ಟೋಬರ್ 13ರಂದು ಆರೋಪಿಗೆ ಜಾಮೀನು ನೀಡಿದೆ. ನಂತರವೂ ಸೂಕ್ತ ಕಾರಣಗಳಿಲ್ಲದೆ ರೈಲ್ವೆ ಪೊಲೀಸರು ಜಾಮೀನು ರದ್ದು ಕೋರಿ ಅರ್ಜಿ ಸಲ್ಲಿಸಿರುವ ಕ್ರಮವನ್ನು ನ್ಯಾಯಾಂಗ ಪ್ರಕ್ರಿಯೆಯ ದರ್ಬಳಕೆಯಲ್ಲದೇ ಮತ್ತೇನೂ ಅಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.