ಕರ್ನಾಟಕ

karnataka

ETV Bharat / city

ರಾಷ್ಟ್ರೀಯ ವಿಪತ್ತು ಘೋಷಣೆಗೆ ಸರ್ಕಾರ ನಕಾರ: ಧರಣಿ ಮಧ್ಯೆ ಧನ ವಿನಿಯೋಗ ವಿಧೇಯಕ ಅಂಗೀಕಾರ - ಎಸ್.ಆರ್.ಪಾಟೀಲ್

ರಾಜ್ಯದಲ್ಲಿ ಸಂಭವಿಸಿದ ನೆರೆಹಾನಿಯನ್ನು 'ರಾಷ್ಟ್ರೀಯ ವಿಪತ್ತು' ಎಂದು ಘೋಷಣೆ ಮಾಡಲು ರಾಜ್ಯ ಸರ್ಕಾರ ನಿರಾಕರಿಸಿದೆ.

ವಿಧಾನ ಪರಿಷತ್ ಕಲಾಪ

By

Published : Oct 12, 2019, 4:39 PM IST

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ನೆರೆಹಾನಿಯನ್ನು 'ರಾಷ್ಟ್ರೀಯ ವಿಪತ್ತು' ಎಂದು ಘೋಷಣೆ ಮಾಡಲು ಸರ್ಕಾರ ನಿರಾಕರಿಸಿದೆ.

ವಿಧಾನ ಪರಿಷತ್ ಕಲಾಪದ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಎಸ್.ಆರ್ ಪಾಟೀಲ್, ಯಡಿಯೂರಪ್ಪನವರೇ ನೀವು ಸುಮ್ಮನೇ ಮುಖ್ಯಮಂತ್ರಿ ಆಗಿಲ್ಲ. ಹೋರಾಟದಿಂದ ಇಲ್ಲಿವರೆಗೆ ಬಂದಿದ್ದೀರಿ, ನಿಜಲಿಂಗಪ್ಪ ಬಳಿಕ ನಾಲ್ಕನೇ ಬಾರಿಗೆ ಸಿಎಂ ಆಗಿದ್ದೀರಿ. ನಿಮ್ಮ ಬಗ್ಗೆ ಅಪಾರ ಗೌರವವಿದೆ, ರಾಜ್ಯದಲ್ಲಿ ಸಂಭವಿಸಿದ ನೆರೆಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ, ಇದರಿಂದ 10 ಸಾವಿರ ಕೋಟಿ ರೂ ಪರಿಹಾರ ಬರಬಹುದು. ಕೊಡಗು ಹಾನಿ ವೇಳೆ ಉಚಿತ‌ ನಿವೇಶನ ನೀಡಿ 9.85 ಲಕ್ಷ ರೂ. ಮನೆ ಕಟ್ಟಲು ಕೊಡಲಾಗಿದೆ. ನಮ್ಮನ್ನು ಮನೆಗೆ ಕಳಿಸಿ ನೀವು ಈಗ ಬಂದಿದ್ದೀರಲ್ಲ. ನೀವೂ ಕೂಡ 10 ಲಕ್ಷ ರೂ ಕೊಡಿ. ಪರಿಹಾರ ಕಾರ್ಯಕ್ಕೆ ವರ್ಗೀಕರಣ ಮಾಡಿರುವ ಎ.ಬಿ ಎರಡಕ್ಕೂ ತಲಾ 1 ಲಕ್ಷ ವಿತರಣೆ, ದುರಸ್ಥಿಗೆ 25 ಸಾವಿರದಿಂದ 50 ಸಾವಿರಕ್ಕೆ ಹೆಚ್ಚಳ ಮಡಿರುವುದನ್ನು ಸ್ವಾಗತ ಮಾಡುತ್ತೇನೆ ಆದರೆ ಮನೆ ಕಟ್ಟಲು ನೀಡುತ್ತಿರುವ 5 ಲಕ್ಷವನ್ನು 10 ಲಕ್ಷಕ್ಕೆ ಹೆಚ್ಚಳ ಮಾಡಿ ಮನವಿ ಮಾಡಿದರು.

ಮುಳುಗುವ ಭೀತಿ‌ ಇರಿವ ಗ್ರಾಮಗಳನ್ನು‌ ಎತ್ತರದ ಸ್ಥಳಕ್ಕೆ ಸ್ಥಳಾಂತರ ಮಾಡಿ, ಕಬ್ಬು ಬೆಳೆ ಸಹ ನಾಶವಾಗಿದ್ದು, ಪ್ರತಿ ಎಕರೆಗೆ 50 ಸಾವಿರ ಪರಿಹಾರ ನೀಡಬೇಕು, ನಿಯಮಾವಳಿಗಳನ್ನು ಬದಿಗಿಟ್ಟು ಪರಿಹಾರ ಪ್ರಕಟಿಸಿ ಎಂದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಮಾಧುಸ್ವಾಮಿ, ಎತ್ತರದ ಸ್ಥಳಕ್ಕೆ‌ ಹೋಗಲು‌ ಸಿದ್ದ ಇರುವವರಿಗೆ ಉಚಿತ ನಿವೇಶನ ನೀಡಿ 5 ಲಕ್ಷ ನೀಡಲು ಸರ್ಕಾರ ಸಿದ್ದವಿದೆ. ಆದರೆ ಜನ ಸಿದ್ದ ಇಲ್ಲ, ನಾವೇನು ಮಾಡುವುದು ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಮತ್ತು ಉಭಯ ರಾಜ್ಯಗಳ ನಡುವೆ ಜಲಾಶಯದಿಂದ ನೀರು ಬಿಡುವ ಮೊದಲು‌ ಚರ್ಚೆ ಮಾಡುವ ಪ್ರಕ್ರಿಯೆ ಆರಂಭಿಸಲಾಗುತ್ತದೆ.‌ ಆದರೆ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡುವ ಪ್ರಕ್ರಿಯೆ ಸಾಕಷ್ಟು ಕ್ಲಿಷ್ಟವಾಗಿದೆ. ಅದಕ್ಕೆ ತುಂಬಾ ಸಮಯ ಬೇಕಾಗುತ್ತದೆ. ಹಾಗಾಗಿ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡುವ ನಿರ್ಣಯ ಕೈಗೊಳ್ಳುವ ವಿಷಯವನ್ನು ಕೈಬಿಡಿ ಎಂದು ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್, ರಾಷ್ಟ್ರೀಯ ವಿಪತ್ತು ಎಂದು ಏಕಾಏಕಿ‌ ಘೋಷಣೆ ಮಾಡಲು‌ ಸಾಧ್ಯವಿಲ್ಲ. ‌ಅದಕ್ಕೆ ಸಾಕಷ್ಟು ನಿಯಮಾವಳಿಗಳಿವೆ. ಯಡಿಯೂರಪ್ಪ ಈಗಾಗಲೇ ಸಾಕಷ್ಟು ನೆರವು ನೀಡಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ಘೋಷಣೆ ಬೇಡಿಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದರು.

ಧನ ವಿನಿಯೋಗ ವಿಧೇಯಕಕ್ಕೆ ಪರಿಷತ್ ಅಂಗೀಕಾರ:

ಕಾಂಗ್ರೆಸ್ ಧರಣಿ ನಡುವೆ ವಿಧಾನ ಪರಿಷತ್​ನಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಧನವಿನಿಯೋಗ ವಿಧೇಯಕ ಮಂಡನೆ ಮಾಡಿದರು.

ಹಣಕಾಸು ವಿಧೇಯಕ ಮಂಡಿಸಿ ಮಾತನಾಡಿದ ಸಿಎಂ, ಕಬ್ಬಿಗೆ ಹೆಚ್ಚಿನ ಹಣ ನೀಡಲು ಸಾಧ್ಯವಿಲ್ಲ, ದೇಶದ ಇತಿಹಾಸದಲ್ಲಿ ರಾಷ್ಟ್ರೀಯ ವಿಪತ್ತು ನಿಯಮಾವಳಿ ಮೀರಿ ಹೆಚ್ಚು ಪರಿಹಾರ ನೀಡಿದ‌ ಉದಾಹರಣೆ ಇದೆಯೇ? ನಾವು ಹೆಚ್ಚುವರಿ ಹಣ ನೀಡಿದ್ದೇವೆ. ಇವತ್ತಿನ ಹಣಕಾಸಿನ ಪರಿಸ್ಥಿತಿಯಲ್ಲಿ ಇದಕ್ಕಿಂತ‌ ಹೆಚ್ಚು ಹಣ ಕೊಡಲು ಸಾಧ್ಯವಿಲ್ಲ, ಬೇರೆ ಯೋಜನೆ ಹಣವನ್ನು ಈ ಕಡೆ ವರ್ಗಾವಣೆ ಮಾಡಿ ಕೊಡಲಾಗಿದೆ. ನಾನು‌ ರೈತ ಪರ ಇರುವವನು ಡಿಸೆಂಬರ್ ವರೆಗೆ ಸಮಯ ನೀಡಿ ನಂತರ ಪರಿಸ್ಥಿತಿ ಸುಧಾರಿಸಿದರೆ ಇನ್ನಷ್ಟು ಸಹಾಯ ಮಾಡೋಣ. ಇದೊಂದು ಬಾರಿ‌ ಸಹಕಾರ ನೀಡಿ, ಆ ಹಣ ಭರ್ತಿ ಮಾಡಲು ಸಾಧ್ಯವಿಲ್ಲ. ಕ್ಷಮಿಸಿ, ಹಣಕಾಸು ಬಿಲ್ ಪಾಸ್ ಮಾಡಿ ಎಂದು ಮನವಿ ಮಾಡಿದರು.

ನಂತರ ಕಾಂಗ್ರೆಸ್ ಸದಸ್ಯರ ಧರಣಿ ನಡುವೆ ವಿಧಾನಸಭೆಯಿಂದ ಅಂಗೀಕಾರ ರೂಪದಲ್ಲಿದ್ದ ಧನವಿನಿಯೋಗ ವಿಧೇಯಕ್ಕೆ ವಿಧಾನ ಪರಿಷತ್ ಧ್ವನಿ ಮತದ ಮೂಲಕ ಅಂಗೀಕಾರ ನೀಡಿತು. ನಂತರ ಸದನವನ್ನು ಅನಿರ್ದಿಷ್ಟಾವದಿಗೆ ಮುಂದೂಡಿಕೆ ಮಾಡಲಾಯಿತು.

ಇನ್ನೂ ಎಸ್.ಆರ್.ಪಾಟೀಲ್ ಮಾತನಾಡುವ ವೇಳೆ ಉತ್ತರಿಸಬೇಕಿದ್ದ ಕಂದಾಯ ಸಚಿವ ಆರ್.ಅಶೋಕ್ ಎದ್ದು‌ ಹೋಗಿದ್ದರು. ಆಗ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ಅವರು ಉತ್ತರಿಸಬೇಕಾದ ಸಚಿವರೇ ಇಲ್ಲ ಎಂದು ಆಡಳಿತ ಪಕ್ಷದ ಕಾಲೆಳೆದರು. ಇದಕ್ಕೆ ಪ್ರತಿಪಕ್ಷ ನಾಯಕ ಎಸ್.ಆರ್ ಪಾಟೀಲ್ ಮುಖ್ಯಮಂತ್ರಿಗಳನ್ನು ನೋಡುತ್ತಾ, ನಾಡಿನ‌ ಯಜಮಾನರೇ ಇದ್ದಾರಲ್ಲ ಬಿಡಿ, ಎನ್ನುತ್ತಾ ಮಾತು ಮುಂದುವರೆಸಿದರು.

ABOUT THE AUTHOR

...view details