ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ನಿಂದ ಪೋಷಕರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳಿಗೆ ನೆರವು ನೀಡಲು ನೀಡಲು ಸರ್ಕಾರ ನಿರ್ಧರಿಸಿದೆ.
ಕೋವಿಡ್-19 ಸೋಂಕಿನಿಂದ ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಸರ್ಕಾರದಿಂದ ಅತ್ಯಾವಶ್ಯಕ ಸೌಕರ್ಯಗಳನ್ನು ಆದ್ಯತೆಯ ಆಧಾರದ ಮೇಲೆ ಒದಗಿಸುವ ಸಲುವಾಗಿ ಅಗತ್ಯ ಕ್ರಮ ವಹಿಸಲು ಮುದ್ರಾಂಕ ಆಯಕ್ತರಾದ ಕೆ.ಪಿ. ಮೋಹನ್‌ರಾಜ್ ರನ್ನು ರಾಜ್ಯ ನೋಡಲ್ ಅಧಿಕಾರಿಯನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.
ಕೋವಿಡ್ ನಿಂದ ಅನೇಕ ಮಕ್ಕಳು ತಂದೆ ತಾಯಿ ಕಳೆದುಕೊಂಡು ಅನಾಥರಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಇದೀಗ ಅನಾಥ ಮಕ್ಕಳ ನೆರವಿಗೆ ಧಾವಿಸಿದೆ. ಈ ಅನಾಥ ಮಕ್ಕಳಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ನೀಡಲು ಸರ್ಕಾರ ಮುಂದಾಗಿದೆ.
ತಂದೆ - ತಾಯಿ, ಪೋಷಕರನ್ನು ಕಳೆದುಕೊಂಡಂತಹ ಮಕ್ಕಳಿಗೆ ಅಗತ್ಯ ಸೌಕರ್ಯಗಳನ್ನು ಆದ್ಯತೆ ಮೇರೆಗೆ ನೀಡಲು ಸೂಚನೆ ನೀಡಲಾಗಿದೆ. ಸಂಬಂಧಪಟ್ಟ, ಎಲ್ಲ ಪ್ರಾಧಿಕಾರಗಳು ಈ ಕುರಿತು ಅಗತ್ಯ ಕ್ರಮವಹಿಸತಕ್ಕದ್ದು, ಮತ್ತು ಅಂತಹವರ ಪೋಷಣೆಗಾಗಿ ದೀರ್ಘಾವಧಿ ಸಹಕಾರ ನೀಡುವಂತೆ ಆದೇಶದಲ್ಲಿ ನಿರ್ದೇಶನ ನೀಡಲಾಗಿದೆ.