ಬೆಂಗಳೂರು:ತಪಾಸಣೆ ಕಡಿಮೆಗೊಳಿಸುವ ಮೂಲಕ ರಾಜ್ಯ ಸರ್ಕಾರ ಕೊರೊನ ನಿಯಂತ್ರಣಕ್ಕೆ ಬರುತ್ತದೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡುತ್ತಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್ಆರ್ ಪಾಟೀಲ್ ಆರೋಪ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ರಾಜ್ಯ ಸರ್ಕಾರ ಕೊರೊನಾ ಟೆಸ್ಟ್ಗಳ ಸಂಖ್ಯೆಯನ್ನು ಗಣನೀಯವಾಗಿ ಇಳಿಸಿ ಕೊರೊನಾ ಸೋಂಕಿತರು ಕಡಿಮೆ ಪತ್ತೆಯಾಗುತ್ತಿದ್ದಾರೆ ಎಂದು ತೋರಿಸುವ ವಿಫಲ ಯತ್ನ ನಡೆಸುತ್ತಿದೆ. ತಾವು ಜಾರಿ ಮಾಡಿರೋ ಲಾಕ್ಡೌನ್ ಪರಿಣಾಮ ಬೀರುತ್ತಿದೆ ಎಂದು ಬಿಂಬಿಸಲು ಬಿಜೆಪಿ ಸರ್ಕಾರ ಟೆಸ್ಟ್ ಕಡಿಮೆ ಮಾಡುವ ಅಡ್ಡದಾರಿಗಿಳಿದಿದೆ. ಇದು ಅಕ್ಷಮ್ಯ, ನಿನ್ನೆ ಇಡೀ ರಾಜ್ಯದಲ್ಲಿ 1.2 ಲಕ್ಷ ಟೆಸ್ಟ್ ಮಾಡಲಾಗಿದೆ. ಸರ್ಕಾರದ ಲೆಕ್ಕದ ಪ್ರಕಾರ ಪ್ರತೀ 100 ಜನರಿಗೆ ಟೆಸ್ಟ್ ಮಾಡಿದರೆ 32 ಜನರಿಗೆ ಪಾಸಿಟಿವ್ ಬರುತ್ತಿದೆ. ಅಂದ್ರೆ ಸೋಂಕು ಪತ್ತೆಯಾಗುತ್ತಿರೋ ದರ ಶೇ.32ರಷ್ಟಿದೆ. ಸೋಂಕು ವ್ಯಾಪಕವಾಗ ಹರಡುತ್ತಿರುವಾಗ ಹೆಚ್ಚಿನ ಸಂಖ್ಯೆಯಲ್ಲಿ ಟೆಸ್ಟ್ ಮಾಡುವ ಬದಲು ಈ ಸಂಖ್ಯೆಯನ್ನು ಇಳಿಸಿದ್ಯಾಕೆ..? ಎಂದು ಪ್ರಶ್ನಿಸಿದ್ದಾರೆ.
ಲಾಕ್ಡೌನ್ ನಿಂದ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಕಡಿಮೆಯಾಗಿದೆ ಎಂದು ಬಿಂಬಿಸಲು ಸರ್ಕಾರ ಟೆಸ್ಟ್ಗಳ ಸಂಖ್ಯೆ ಕಡಿಮೆ ಮಾಡಿದೆ. ನಿನ್ನೆ ಬೆಂಗಳೂರಿನಲ್ಲಿ ಕೇವಲ 32,862 ಟೆಸ್ಟ್ಗಳನ್ನಷ್ಟೇ ಮಾಡಲಾಗಿದ್ದು 16,747 ಕೇಸ್ ಪತ್ತೆಯಾಗಿದೆ ಎಂದು ಲೆಕ್ಕ ತೋರಿಸಲಾಗಿದೆ. ಅಂದ್ರೆ ಬೆಂಗಳೂರಿನಲ್ಲಿ ಶೇ.50 ರಷ್ಟು ಪಾಸಿಟಿವಿಟಿ ರೇಟ್ ಇದೆ. ಬೆಂಗಳೂರಿನಲ್ಲಿ ಪ್ರತೀ ಇಬ್ಬರಿಗೆ ಟೆಸ್ಟ್ ಮಾಡಿದರೆ ಒಬ್ಬರಿಗೆ ಪಾಸಿಟಿವ್ ಬರುತ್ತಿದೆ. ಇಂತಹ ಸಂದರ್ಭದಲ್ಲಿ ಟೆಸ್ಟ್ ಸಂಖ್ಯೆಯನ್ನು ಕಡಿಮೆ ಮಾಡಿದ್ದೇಕೆ? ಬೆಂಗಳೂರಲ್ಲಿ ಮೊದಲು ಪ್ರತಿದಿನ 65 ರಿಂದ 75 ಸಾವಿರ ಟೆಸ್ಟ್ ಮಾಡಲಾಗುತ್ತಿತ್ತು. ಲಾಕ್ಡೌನ್ ನಿಂದ ಕೊರೊನಾ ನಿಯಂತ್ರಿಸಿದ್ದೇವೆ ಎಂದು ತೋರಿಸಲು ಟೆಸ್ಟ್ ಸಂಖ್ಯೆ ಕಡಿಮೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಸಾವಿನ ಸಂಖ್ಯೆ ಮುಚ್ಚಿಟ್ಟಿತ್ತು
ಈ ಮೊದಲು ಕೊರೊನಾ ಸೋಂಕಿತರ ಸಾವಿನ ಸಂಖ್ಯೆಗಳನ್ನು ಮುಚ್ಚಿಟ್ಟು ರಾಜ್ಯದ ಜನರ ಮುಂದೆ ಬೆತ್ತಲಾಗಿತ್ತು. ಈಗ ಟೆಸ್ಟ್ಗಳ ಸಂಖ್ಯೆಯನ್ನು ಕಡಿಮೆ ಮಾಡಿ, ಕೊರೊನಾ ನಿಯಂತ್ರಣಕ್ಕೆ ತಂದಿದ್ದೇವೆ ಎಂದು ಬಿಂಬಿಸಲು ಹೊರಟಿದೆ. ಇದು ಅತ್ಯಂತ ನಾಚಿಕೆಗೇಡಿನ ವಿಷಯ. ಕೊರೊನಾದಿಂದ ಎಷ್ಟು ಜನ ಸತ್ತರೂ ಪರವಾಗಿಲ್ಲ ಎಂದು ಭಾವಿಸಿದೆ ಈ ಸರ್ಕಾರ. ಪ್ರಧಾನಿ ನರೇಂದ್ರ ಮೋದಿ ಅವರು ಸೋಂಕಿತರ ಸಂಖ್ಯೆ ಹೆಚ್ಚಿದರೂ ಚಿಂತಿಯಿಲ್ಲ, ಟೆಸ್ಟ್ ಸಂಖ್ಯೆ ಹೆಚ್ಚಿಸಿ ಎಂದು ಸೂಚಿಸಿದ್ದರು. ಆದ್ರೆ ಬಿಎಸ್ ಯಡಿಯೂರಪ್ಪ ಅವರ ಸರ್ಕಾರ ಪ್ರಧಾನಿಗಳ ಮಾತಿಗೆ, ತಜ್ಞರ ಮಾತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಟೆಸ್ಟ್ ಕಡಿಮೆ ಮಾಡಿ ಸೋಂಕಿತರ ಸಂಖ್ಯೆ ಕಡಿಮೆ ತೋರಿಸಿದರೆ ಕೊರೊನಾ ನಿಯಂತ್ರಣಕ್ಕೆ ಬಂದಂತಾಗುತ್ತಾ..? ಎಂದಿದ್ದಾರೆ.
ಆರು ದಿನಗಳಲ್ಲಿ 2,834 ಸೋಂಕಿತರು ಮೃತ
6 ದಿನಗಳಲ್ಲಿ ಕರ್ನಾಟಕದಲ್ಲಿ 2,834 ಸೋಂಕಿತರು ಮೃತರಾಗಿದ್ದಾರೆ. ಮನೆಗಳಲ್ಲಿ ಸತ್ತವರು, ಬೆಡ್ ಸಿಗದೇ ಬೀದಿಗಳಲ್ಲಿ ಸತ್ತವರ ಸಂಖ್ಯೆ ಇನ್ನೂ ದೊಡ್ಡದಿದೆ. ರಾಜ್ಯದಲ್ಲಿ ಸೋಂಕಿತರ ಮಾರಣಹೋಮವೇ ನಡೆಯುತ್ತಿದೆ. ಇಂಥಾ ಸಂದರ್ಭದಲ್ಲಿ ತಮ್ಮ ವೈಫಲ್ಯ ಮುಚ್ಚಿಟ್ಟುಕೊಳ್ಳಲು ರಾಜ್ಯ ಸರ್ಕಾರ ಕೊರೊನಾ ಟೆಸ್ಟ್ಗಳ ಸಂಖ್ಯೆಯನ್ನು ಕಡಿಮೆ ಮಾಡಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರೇ, ಆರೋಗ್ಯ ಸಚಿವ ಸುಧಾಕರ್ ಅವರೇ ಟೆಸ್ಟ್ಗಳನ್ನು ಕಡಿಮೆ ಮಾಡಿ ಸೋಂಕಿತರ ಸಂಖ್ಯೆಯನ್ನು ಮುಚ್ಚಿಡುವ ಅವಶ್ಯಕತೆ ಏನಿದೆ ? ನಿಮ್ಮ ವೈಫಲ್ಯದ ಫಲವನ್ನು ಈಗ ಇಡೀ ರಾಜ್ಯ ಅನುಭವಿಸುತ್ತಿದೆ. ಇಂಥಾ ನಾಟಕ ಬಿಟ್ಟು ಕೊರೊನಾ ಟೆಸ್ಟ್ಗಳ ಸಂಖ್ಯೆಯನ್ನು ಹೆಚ್ಚಳ ಮಾಡಿ ಎಂದು ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.
ಬಡ ಜನರಿಗೆ 10 ಸಾವಿರ ಪರಿಹಾರ ಕೊಡಿ