ಕರ್ನಾಟಕ

karnataka

ETV Bharat / city

ಗೆಜೆಟೆಡ್​ ಪ್ರೊಬೆಷನರಿ ಅಭ್ಯರ್ಥಿಗಳ ಭವಿಷ್ಯ ಕುರಿತು ಕ್ಯಾಬಿನೆಟ್​ ಸಭೆಯಲ್ಲಿ ನಿರ್ಧಾರ: ಸಿಎಂ ಭರವಸೆ - ಗೆಜೆಟೆಡ್​ ಪ್ರೊಬೆಷನರಿ ಅಭ್ಯರ್ಥಿಗಳು

2011 ರಲ್ಲಿ 362 ಮಂದಿಯನ್ನು ಗೆಜೆಟೆಡ್​​ ಪ್ರೊಬೆಷನರಿ ಹುದ್ದೆಗಳಿಗೆ ನೇಮಕ ಮಾಡಲಾಗಿತ್ತು. ಆದ್ರೆ ನಂತರ ಬಂದ ಸರ್ಕಾರ ಅದನ್ನು ರದ್ದುಗೊಳಿಸಿತ್ತು. ಈ ಕುರಿತು ವಿಧಾನಸಭೆಯಲ್ಲಿಂದು ಧ್ವನಿ ಎತ್ತಿದ ಕಾಂಗ್ರೆಸ್​ ಶಾಸಕ ಹೆಚ್. ಕೆ. ಪಾಟೀಲ್ ಮತ್ತು ಜೆಡಿಎಸ್​ ಶಾಸಕ ಹೆಚ್​. ಡಿ. ರೇವಣ್ಣ ಅವರ ಪ್ರಶ್ನೆಗೆ ಉತ್ತರಿಸಿದ ಸಿಎಂ ಯಡಿಯೂರಪ್ಪ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.

the-future-of-gazetted-probationary-candidates-job
ಸಿಎಂ ಬಿ. ಎಸ್​. ಯಡಿಯೂರಪ್ಪ

By

Published : Mar 20, 2020, 4:50 PM IST

ಬೆಂಗಳೂರು: ರಾಜ್ಯ ಲೋಕಸೇವಾ ಆಯೋಗದ ವತಿಯಿಂದ 2011 ರಲ್ಲಿ ನೇಮಕಗೊಂಡ 362 ಗೆಜೆಟೆಡ್​ ಪ್ರೊಬೆಷನರಿ ಅಭ್ಯರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದಂತೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ವಿಧಾನಸಭೆಯಲ್ಲಿ ಇಂದು ನಿಯಮ 69 ರಡಿ ಹಿರಿಯ ಶಾಸಕರಾದ ಹೆಚ್. ಕೆ. ಪಾಟೀಲ್, ಹೆಚ್. ಡಿ. ರೇವಣ್ಣ ಸೇರಿದಂತೆ ಹಲವು ಸದಸ್ಯರು ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಸಿಎಂ, ಈ ಕುರಿತು ಧಿಡೀರನೆ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಕರ್ನಾಟಕ ನ್ಯಾಯ ಮಂಡಳಿ, ಹೈಕೋರ್ಟ್ ಹಾಗೂ ಸರ್ವೋಚ್ಛ ನ್ಯಾಯಾಲಯಗಳಲ್ಲಿ ಪ್ರಕರಣ ಇರುವುದರಿಂದ ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ತಿಳಿಸಿದರು.

ಇದಕ್ಕೂ ಮುನ್ನ ಕಾನೂನು ಸಚಿವ ಜೆ. ಸಿ. ಮಾಧುಸ್ವಾಮಿ ಮಾತನಾಡಿ, 362 ಅಭ್ಯರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದಂತೆ ಸರ್ಕಾರಿ ಆದೇಶ ಹೊರಡಿಸಬೇಕೇ? ಸುಗ್ರೀವಾಜ್ಞೆಯ ಮೂಲಕ ಅವಕಾಶ ಕಲ್ಪಿಸಬೇಕೇ? ಅಥವಾ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿ ಹಿಂದಿನ ಸರ್ಕಾರದ ನೇಮಕಾತಿಗೆ ಆಕ್ಷೇಪ ವ್ಯಕ್ತಪಡಿಸದೆ ಇರುವುದನ್ನು ಪರಿಗಣಿಸಬೇಕೇ? ಎಂಬುದನ್ನು ಪರಾಮರ್ಶಿಸಲಾಗುವುದು ಎಂದು ಹೇಳಿದರು.

ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು, ಸದಸ್ಯರ ವಿರುದ್ಧ ಈ ನೇಮಕಾತಿ ವಿಷಯದಲ್ಲಿ ಯಾವ ದೂರುಗಳೂ ದಾಖಲಾಗಿಲ್ಲ. ಪ್ರಕರಣ ಕೂಡಾ ದಾಖಲಾಗಿಲ್ಲ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು. 362 ಅಭ್ಯರ್ಥಿಗಳ ಭವಿಷ್ಯದ ಕುರಿತು ನಿರ್ಣಯ ಕೈಗೊಳ್ಳಲಾಗುವುದು ಎಂದರು.

ಚರ್ಚೆಯಲ್ಲಿ ಕಾಂಗ್ರೆಸ್​ ಹಿರಿಯ ಶಾಸಕ ಹೆಚ್. ಕೆ. ಪಾಟೀಲ್, ಜೆಡಿಎಸ್​ ಶಾಸಕ ಹೆಚ್. ಡಿ. ರೇವಣ್ಣ ಸೇರಿದಂತೆ ಹಲವರು ಮಾತನಾಡಿ, 2011 ರಲ್ಲಿ 362 ಅಭ್ಯರ್ಥಿಗಳನ್ನು ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ನೇಮಕಾತಿ ಮಾಡಲಾಗಿತ್ತು. ಆದರೆ ಅದನ್ನು ನಂತರ ಬಂದ ಸರ್ಕಾರ ರದ್ದುಗೊಳಿಸಿತ್ತು. ಇದರ ವಿರುದ್ಧ ಅಭ್ಯರ್ಥಿಗಳು ನ್ಯಾಯಾಲಯಕ್ಕೆ ಹೋದರು. ಆದರೆ ಅವರ ಭವಿಷ್ಯ ಇನ್ನೂ ಅತಂತ್ರವಾಗಿದೆ. ಸರ್ಕಾರ ತಕ್ಷಣವೇ ಅವರ ವಿಷಯದಲ್ಲಿ ಒಂದು ತೀರ್ಮಾನಕ್ಕೆ ಬಂದು ಅವರ ಭವಿಷ್ಯ ಕಾಪಾಡಬೇಕು ಎಂದು ಮನವಿ ಮಾಡಿದರು.

ABOUT THE AUTHOR

...view details