ವರ್ಷದಿಂದ ವರ್ಷಕ್ಕೆ ಡೆಂಗ್ಯೂ ಪ್ರಕರಣ ಇಳಿಕೆ ; ಮೇ 16 ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ.. - ಮೇ 16 ರಾಷ್ಟ್ರೀಯ ಡೆಂಘಿ ದಿನಾಚರಣೆ
ಡೆಂಗ್ಯೂ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ವ್ಯಾಪಕ ಜನಜಾಗೃತಿ ಅಭಿಯಾನದ ಉದ್ದೇಶದಿಂದ, ಭಾರತ ಸರ್ಕಾರದ ಮಾರ್ಗಸೂಚಿಯಂತೆ, ಪ್ರತಿ ಮೇ 16ರಂದು ರಾಷ್ಟ್ರೀಯ ಡೆಂಗ್ಯೂ ದಿನವನ್ನಾಗಿ ಆಚರಿಸಲಾಗುತ್ತಿದೆ.
ಮೇ 16 ರಾಷ್ಟ್ರೀಯ ಡೆಂಘಿ ದಿನಾಚರಣೆ
By
Published : May 15, 2022, 4:17 PM IST
|
Updated : May 15, 2022, 4:27 PM IST
ಬೆಂಗಳೂರು :ಐದಾರು ವರ್ಷಗಳ ಹಿಂದೆ ಡೆಂಗ್ಯೂ ಜ್ವರ ಭಾಗಶಃ ಜನರನ್ನು ಕಾಡಿತ್ತು. 2017ರಲ್ಲಿ ಬರೋಬ್ಬರಿ 17 ಸಾವಿರಕ್ಕೂ ಹೆಚ್ಚು ಜನರು ಡೆಂಗ್ಯೂ ಜ್ವರದಿಂದ ಬಳಲಿದ್ದರು. ಹೀಗಾಗಿ, ರಾಷ್ಟ್ರೀಯ ರೋಗವಾಹಕ ರೋಗಗಳ ನಿಯಂತ್ರಣ ಕಾರ್ಯಕ್ರಮದ ಅನ್ವಯ ಭಾರತ ಸರ್ಕಾರದ ಮಾರ್ಗಸೂಚಿಯಂತೆ, ವಿವಿಧ ರೋಗವಾಹಕ ಆಶ್ರಿತ ರೋಗಗಳ ಮುಂಜಾಗ್ರತಾ ಹಾಗೂ ನಿಯಂತ್ರಣ ಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಇದರ ವಿಶೇಷವಾಗಿ ಡೆಂಗ್ಯೂ ನಿಯಂತ್ರಣದಲ್ಲಿ ರೋಗ ಪ್ರಸರಣ ಅವಧಿಯ ಮುನ್ನವೇ ಸಮುದಾಯವನ್ನು ಸಜ್ಜುಗೊಳಿಸುವಿಕೆ ಮತ್ತು ಸಂಬಂಧಪಟ್ಟ ಇಲಾಖೆಗಳ ಸಹಯೋಗದ ಮೂಲಕ ಡೆಂಗ್ಯೂ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ವ್ಯಾಪಕ ಜನಜಾಗೃತಿ ಅಭಿಯಾನದ ಉದ್ದೇಶದಿಂದ, ಭಾರತ ಸರ್ಕಾರದ ಮಾರ್ಗ ಸೂಚಿಯಂತೆ, ಪ್ರತಿ ಮೇ 16ರಂದು ರಾಷ್ಟ್ರೀಯ ಡೆಂಗ್ಯೂ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ವರ್ಷದ ಘೋಷ ವಾಕ್ಯವಾಗಿ, 'ಡೆಂಗ್ಯೂ ತಡೆಗಟ್ಟಬಹುದು, ಬನ್ನಿ ಎಲ್ಲರೂ ಕೈಜೋಡಿಸೋಣ' ಎಂಬುದಾಗಿದೆ.( Dengue is Preventable: Let's join hands)
ಡೆಂಗ್ಯೂ ದಿನದ ಉದ್ದೇಶ :
ಮನೆಯ ಸುತ್ತಮುತ್ತಲಿನ ಪ್ರದೇಶದ ಘನತ್ಯಾಜ್ಯ ವಸ್ತುಗಳಲ್ಲಿ ಮಳೆನೀರು ಸಂಗ್ರಹವಾಗದಂತೆ ಎಚ್ಚರವಹಿಸುವುದರಿಂದ ಈಡಿಸ್ ಸೊಳ್ಳೆಗಳ ಉತ್ಪತ್ತಿಯನ್ನು ತಡೆಗಟ್ಟುವುದು.
ಡೆಂಗ್ಯೂ ನಿಯಂತ್ರಣದಲ್ಲಿ ಸಮುದಾಯದ ಸಕ್ರಿಯ ಭಾಗವಹಿಸುವಿಕೆ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಗತ್ಯ ಸಹಕಾರವನ್ನು ಪಡೆಯುವುದು.
ಯಾವುದೇ ಜ್ವರವಿದ್ದರೂ ನಿರ್ಲಕ್ಷ್ಯ ಮಾಡದೇ, ತಕ್ಷಣ ವೈದ್ಯರಲ್ಲಿ ತೆರಳಿ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಜ್ವರದಿಂದ ಉಂಟಾಗುವ ಸಾವು-ನೋವುಗಳನ್ನು ತಡೆಗಟ್ಟಬಹುದು.
ಡೆಂಗ್ಯೂ ಜ್ವರ ಹೇಗೆ ಬರುತ್ತೆ?: ಸೋಂಕಿತ ಈಡಿಸ್ ಈಜಿಫ್ಟ್ ಸೊಳ್ಳೆ ಕಡಿತದಿಂದ ಹರಡುವ ಡೆಂಘೀ ಜ್ವರವು ವೈರಾಣುಗಳಿಂದ ಉಂಟಾಗುತ್ತೆ. ಡೆಂಗ್ಯೂ ಜ್ವರದ ಲಕ್ಷಣಗಳು-ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಬರುವುದು. ಹಾಗೇ, ವಾಕರಿಕೆ, ವಾಂತಿ, ಆಂತರಿಕ ರಕ್ತಸ್ರಾವ, ಒಸಡುಗಳಲ್ಲಿ ರಕ್ತಸ್ರಾವ ಉಂಟಾಗುತ್ತೆ. ಇನ್ನು ಡೆಂಗ್ಯೂ ಜ್ವರವನ್ನು ತಡೆಗಟ್ಟಲು ಲಸಿಕೆ ಲಭ್ಯವಿಲ್ಲ. ಆದ್ದರಿಂದ ರೋಗ ಲಕ್ಷಣಗಳಿಗೆ ಅನುಗುಣವಾದ ಚಿಕಿತ್ಸೆಯಿಂದ ಗುಣಪಡಿಸಬಹುದು. ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದಲ್ಲಿ, ಸಾವು ಸಂಭವಿಸುವ ಸಾಧ್ಯತೆ ಇರುತ್ತೆ.
ಡೆಂಗ್ಯೂ ಹರಡದಂತೆ ನಿಯಂತ್ರಣ ಕ್ರಮವೇನು? :
ಮನೆಯಲ್ಲಿ ತೊಟ್ಟಿ, ಬ್ಯಾರೆಲ್, ಡ್ರಂಗಳಲ್ಲಿನ ನೀರನ್ನು ವಾರಕ್ಕೊಮ್ಮೆ ಖಾಲಿ ಮಾಡಿ. ಉಜ್ಜಿ ತೊಳೆದು ಪುನಃ ನೀರು ತುಂಬಿಸುವುದು. ಹಾಗೇ ತೊಟ್ಟಿ, ಬ್ಯಾರೆಲ್ ಡ್ರಂಗಳನ್ನು ಯಾವಾಗಲೂ ಮುಚ್ಚಿಡುವುದು.
ಮನೆಯ ಸುತ್ತಮುತ್ತ ಎಸೆದಿರುವ ವಸ್ತುಗಳಲ್ಲಿ ಮಳೆ ನೀರು ಶೇಖರಣೆಯಾಗದಂತೆ ಎಚ್ಚರಿಕೆ ವಹಿಸುವುದು.
ಈಡಿಸ್ ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಕಚ್ಚುವುದರಿಂದ ಹಗಲು ಹೊತ್ತಿನಲ್ಲಿ ವಿಶ್ರಾಂತಿ ಪಡೆಯುವವರು, ವಿಶೇಷವಾಗಿ ಮಕ್ಕಳು, ವೃದ್ಧರು ಹಾಗೂ ಗರ್ಭಿಣಿಯರು ಸೊಳ್ಳೆ ಪರದೆಯನ್ನು ಬಳಸಬೇಕು.