ಬೆಂಗಳೂರು: ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಕರ್ನಾಟಕ (ರೇರಾ) ಕಾಯ್ದೆಯನ್ನು ಇನ್ನಷ್ಟು ಬಲಗೊಳಿಸಲು ಹೊಸ ಮಾರ್ಪಾಡು ತರಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರೇರಾ ಕಾಯ್ದೆಯಡಿ ಪರಿಹಾರ ವಸೂಲಾತಿ ಮಾಡುವಲ್ಲಿ ವಿಳಂಬವಾಗುತ್ತಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರ ರೇರಾ ನಿಯಮ-2017ಗೆ ತಿದ್ದುಪಡಿ ತರಲು ಮುಂದಾಗಿದ್ದೇವೆ. ಇದರಿಂದ ಮೋಸಕ್ಕೊಳಗಾದ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದರು.
ಅಪಾರ್ಟ್ಮೆಂಟ್ಗಳ ನಿರ್ಮಾಣ ಮತ್ತು ಖರೀದಿ ನಡುವೆ ಪ್ರಾಧಿಕಾರ ಸಂಪರ್ಕ ಸೇತುವೆಯಾಗಲಿದೆ. ಅಪಾರ್ಟ್ಮೆಂಟ್ ಖರೀದಿ ವ್ಯವಹಾರ ಕಾನೂನು ಚೌಕಟ್ಟಿನಲ್ಲಿ ತರುತ್ತೇವೆ. 4 ಸಾವಿರ ರಿಯಲ್ ಎಸ್ಟೇಟ್ ಏಜೆಂಟ್ಗಳನ್ನು ನೋಂದಣಿ ಮಾಡಿಸಲಾಗಿದೆ. ರಾಜ್ಯದಲ್ಲಿ ಹಲವು ಅಪಾರ್ಟ್ಮೆಂಟ್ ಮಾಲೀಕರು ನಿಯಮ ಪಾಲಿಸುತ್ತಿಲ್ಲ. ರೇರಾ ಪ್ರಾಧಿಕಾರವು ಅಪಾರ್ಟ್ಮೆಂಟ್ ಖರೀದಿ, ನಿರ್ಮಾಣ ಸಂಬಂಧ ದೂರುಗಳನ್ನು ಪರಿಶೀಲಿಸಲಿದೆ. ಎಲ್ಲವೂ ರೇರಾ ಕಾಯ್ದೆಯಡಿಯೇ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
1.20 ಲಕ್ಷ ನಿವೇಶನಗಳನ್ನು ಬಡವರಿಗೆ ಹಂಚಲು ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನೊಂದು ತಿಂಗಳಲ್ಲಿ ಈ ಕುರಿತು ಪ್ರಕ್ರಿಯೆ ಆರಂಭವಾಗಲಿದ್ದು, ಬಡವರಿಗೆ ಉಚಿತ ನಿವೇಶನ ಜೊತೆಗೆ ಮೂಲಸೌಕರ್ಯ ಒದಗಿಸುತ್ತೇವೆ ಎಂದು ತಿಳಿಸಿದರು.
ಪ್ರಧಾನ ಮಂತ್ರಿ ಟೌನ್ಶಿಪ್ ನಿರ್ಮಾಣ
ಜಿಗಣಿ ಹೋಬಳಿಯ ಸ್ವಾಮಿ ವಿವೇಕಾನಂದ ಯೋಗ ವಿವಿ ಬಳಿ 1,938 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಮೂಲ ಸೌಕರ್ಯದ 30,000 ನಿವೇಶನಗಳ ಪ್ರಧಾನ ಮಂತ್ರಿ ಟೌನ್ ಶಿಪ್ ನಿರ್ಮಿಸಲು ಯೋಜಿಸಲಾಗಿದೆ. ಇಲ್ಲಿ 100 ಎಕರೆ ಜಾಗದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ನಿರ್ಮಾಣ ಮಾಡಲಿದ್ದೇವೆ. ಮುತ್ಯಾಲ ಮಡುವಿನಲ್ಲಿ 120 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಮಾಡಲಿದ್ದೇವೆ ಎಂದರು.