ಬೆಂಗಳೂರು: ನಿರಾಶ್ರಿತರಾಗಿರುವ ವಲಸೆ ಕಾರ್ಮಿಕರಿಗೆ ಅಗತ್ಯ ಸೌಲಭ್ಯಗಳನ್ನು ನೀಡದಿದ್ದರೆ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಲಾಕ್‌ಡೌನ್ ನಿಭಾಯಿಸಲು ಸರ್ಕಾರ ವಲಸೆ ಕಾರ್ಮಿಕರ ಅನುಕೂಲಕ್ಕಾಗಿ ತೆರೆದಿರುವ ಶಿಬಿರಗಳಿಗೆ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ಹಿಂದಿನ ವಿಚಾರಣೆ ವೇಳೆ ಪ್ರಾಧಿಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ನಿರ್ದೇಶನ ನೀಡಿತ್ತು. ಅದರಂತೆ ವರದಿ ಸಲ್ಲಿಸಿದೆ.
ವರದಿ ದಾಖಲಿಸಿಕೊಂಡಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ, ಬೆಂಗಳೂರಿನ ವಲಸೆ ಕಾರ್ಮಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಹಾಗೂ ಕಾನೂನು ಸೇವಾ ಪ್ರಾಧಿಕಾರ ನೀಡಿರುವ ಸಲಹೆಗಳನ್ನು ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಸರ್ಕಾರ ಹಾಗೂ ಬಿಬಿಎಂಪಿಗೆ ತಾಕೀತು ಮಾಡಿದೆ.
ವರದಿ ಸಾರಾಂಶ: ಬೆಂಗಳೂರಿನ ಮೆಜೆಸ್ಟಿಕ್, ರೈಲು ನಿಲ್ದಾಣ, ಬಳೇಪೇಟೆ ಸರ್ಕಲ್ ಸುತ್ತಮುತ್ತ ಸುಮಾರು 2 ಸಾವಿರಕ್ಕೂ ಅಧಿಕ ವಲಸೆ ಕಾರ್ಮಿಕರು ರಸ್ತೆ ಮತ್ತು ರಸ್ತೆ ಬದಿಯ ಬಿಡಾರಗಳಲ್ಲಿ ವಾಸ ಮಾಡುತ್ತಿದ್ದಾರೆ. ಇವರಲ್ಲಿ ಬಹುತೇಕರು ಉತ್ತರ ಕರ್ನಾಟಕ, ಬಿಹಾರ, ಜಾರ್ಖಂಡ್ ರಾಜ್ಯದವರು.
ಭೇಟಿ ವೇಳೆ ಗಮನಿಸಿದಂತೆ ಇವರಲ್ಲಿ ಯಾರೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಂಡಿದ್ದು ಕಂಡುಬಂದಿಲ್ಲ. ರಾಜ್ಯದ ಒಟ್ಟಾರೆ ಕೋವಿಡ್-19 ಪಾಸಿಟಿವ್ ಪ್ರಕರಣಗಳಲ್ಲಿ ಅತಿ ಹೆಚ್ಚು ಬೆಂಗಳೂರಲ್ಲೇ ಇವೆ. ಹೀಗಿರುವಾಗ ವಲಸೆ ಕಾರ್ಮಿಕರ ವಿಚಾರದಲ್ಲಿ ಎಚ್ಚೆತ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳದಿದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.