ಬೆಂಗಳೂರು:ನೆರೆ ಹಾವಳಿಯಿಂದ ಒಟ್ಟು 24,942 ಕೋಟಿ ರೂ. ನಷ್ಟ ಸಂಭವಿಸಿದ್ದು, ರಾಜ್ಯ ವಿಪತ್ತು ನಿರ್ವಹಣಾ ನಿಧಿ (ಎಸ್‌ಡಿಆರ್‌ಎಫ್)ಯ ಮಾರ್ಗಸೂಚಿ ಪ್ರಕಾರ 2,385 ಕೋಟಿ ರೂ.ಗಳ ಅನುದಾನ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಸ್ಪಷ್ಟಪಡಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಅತಿವೃಷ್ಟಿ, ಪ್ರವಾಹ ಹಾನಿಯ 3ನೇ ಹಂತದ ಸಮೀಕ್ಷೆಗಾಗಿ ಕೇಂದ್ರ ಅಧ್ಯಯನ ತಂಡ ಇಷ್ಟರಲ್ಲೇ ಭೇಟಿ ನೀಡಲಿದೆ. ಕೇಂದ್ರದಿಂದ ಪೂರ್ಣ ಪ್ರಮಾಣದ ನೆರವಿಗೆ ಕಾಯದೇ, ಎಸ್‌ಡಿಆರ್‌ಎಫ್ 737.80 ಕೋಟಿ ರೂ. ಬಿಡುಗಡೆ ಮಾಡಿ ತುರ್ತು ಅಗತ್ಯ ಕೆಲಸಗಳನ್ನು ನಿರ್ವಹಿಸಲಾಗಿದೆ ಎಂದರು. ಅಕ್ಟೋಬರ್ನಲ್ಲಿ ಸಂಭವಿಸಿದ ನೆರೆಗೆ 9833.04 ಕೋಟಿ ರೂ. ಹಾನಿಯಾಗಿದೆ. ಎಸ್‌ಡಿಆರ್‌ಎಫ್ ಮಾರ್ಗಸೂಚಿಯನ್ವಯ 1078.46 ಕೋಟಿ ರೂ. ನಷ್ಟ ಅನುಭವಿಸಿರುವ ಬಗ್ಗೆ ಕೇಂದ್ರಕ್ಕೆ ಮೆಮೊರಾಂಡಮ್ ಸಲ್ಲಿಸಲಾಗಿದೆ ಎಂದು ತಿಳಿಸಿದರು.