ಬೆಂಗಳೂರು: ಭ್ರಷ್ಟಾಚಾರ ನಿಗ್ರಹದಳದಲ್ಲಿ ದಿನೇದಿನೆ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ತ್ವರಿತಗತಿಯಲ್ಲಿ ತನಿಖೆ ನಡೆಸಲು ಎಸಿಬಿಯಲ್ಲಿ ಸಿಬ್ಬಂದಿ ಕೊರತೆ ಎದುರಾಗಿದೆ. ಈ ನಿಟ್ಟಿನಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜನೆಗಾಗಿ ರಾಜ್ಯ ಸರ್ಕಾರಕ್ಕೆ ಎಸಿಬಿ ಪ್ರಸ್ತಾವನೆ ಸಲ್ಲಿಸಿದೆ.
ಹೆಚ್ಚುವರಿ ಸಿಬ್ಬಂದಿ ನಿಯೋಜನೆಗಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಎಸಿಬಿ.. - banglore latest news
ಭ್ರಷ್ಟಾಚಾರ ನಿಗ್ರಹ ದಳದಲ್ಲಿ ದಿನೇದಿನೆ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿವೆ. ತ್ವರಿತಗತಿಯಲ್ಲಿ ತನಿಖೆ ನಡೆಸಲು ಎಸಿಬಿಯಲ್ಲಿ ಸಿಬ್ಬಂದಿ ಕೊರತೆ ಎದುರಾಗಿದೆ. ಈ ನಿಟ್ಟಿನಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜನೆಗಾಗಿ ರಾಜ್ಯ ಸರ್ಕಾರಕ್ಕೆ ಎಸಿಬಿ ಪ್ರಸ್ತಾವನೆ ಸಲ್ಲಿಸಿದೆ.
ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಲೋಕಾಯುಕ್ತಕ್ಕೆ ನೀಡಲಾಗಿದ್ದ ಪರಮಾಧಿಕಾರ ಮೊಟಕುಗೊಳಿಸಿ, ಹೊಸದಾಗಿ ಎಸಿಬಿ ಸ್ಥಾಪನೆಯಾದಾಗಿನಿಂದ ಈವರೆಗೂ ಸಾವಿರಕ್ಕೂ ಅಧಿಕ ಪ್ರಕರಣ ದಾಖಲಾಗಿವೆ. ಕಳೆದ ವರ್ಷದಲ್ಲಿ 375 ಪ್ರಕರಣ ದಾಖಲಾದರೆ, ಈ ವರ್ಷ ಈವರೆಗೂ 150ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ಲೋಕಾಯುಕ್ತಕ್ಕೆ ನೀಡಲಾಗಿದ್ದ ಅಧಿಕಾರ ಮೊಟಕುಗೊಳಿಸಿ,ಅಂದಿನ ಸರ್ಕಾರ ಎಸಿಬಿ ರಚಿಸಿತ್ತು. ಪ್ರಾರಂಭದ ವರ್ಷಗಳಲ್ಲಿ ಅನ್ಯಾಯಕ್ಕೆ ಒಳಗಾದವರು ಎಸಿಬಿಗೆ ದೂರು ನೀಡದೇ, ಲೋಕಾಯುಕ್ತಕ್ಕೆ ನೀಡುವವರ ಸಂಖ್ಯೆ ಅಧಿಕವಾಗಿತ್ತು. ತದನಂತರ ಭ್ರಷ್ಟ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ಮಾಡಿ, ಪ್ರಕರಣ ದಾಖಲಿಸಿಕೊಂಡು ಪಾರದರ್ಶಕವಾಗಿ ತನಿಖೆ ನಡೆಸುವ ಮೂಲಕ ಸಾರ್ವಜನಿಕರ ನಂಬಿಕೆಗೆ ಪಾತ್ರವಾಗಿತ್ತು.
ಸದ್ಯ, ಎಸಿಬಿಗೆ ದೂರು ನೀಡುವ ಪ್ರಮಾಣ ದಿನೇದಿನೆ ಹೆಚ್ಚಳವಾಗುತ್ತಿದೆ. ಇದರಿಂದ ನಿಗದಿತ ಕಾಲಮಿತಿಯಲ್ಲಿ ತನಿಖೆ ನಡೆಸಿ, ದೋಷಾರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಲು ವಿಳಂಬವಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಸಿಬ್ಬಂದಿ ಕೊರತೆ. ಪ್ರಸ್ತುತ ಪ್ರತಿಯೊಂದು ಜಿಲ್ಲೆಯಲ್ಲಿ ಓರ್ವ ಡಿವೈಎಸ್ಪಿ, ಇಬ್ಬರು ಇನ್ಸ್ಪೆಕ್ಟರ್ ಹಾಗೂ ಐವರು ಸಿಬ್ಬಂದಿ ಇದ್ದಾರೆ. ಐವರು ಸಿಬ್ಬಂದಿ ಇಟ್ಟುಕೊಂಡು ತ್ವರಿತ ಹಾಗೂ ಪಾರದರ್ಶಕ ತನಿಖೆ ನಡೆಸಲು ಅಸಾಧ್ಯ ಹಾಗೂ ತೀರಾ ವಿಳಂಬವಾಗಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇದೇ ಪರಿಸ್ಥಿತಿಯಿದೆ. ಹೀಗಾಗಿ ಪ್ರತಿ ಜಿಲ್ಲೆಗೆ ನೀಡಲಾಗಿರುವ ಸಿಬ್ಬಂದಿಯನ್ನು 5 ರಿಂದ 10ಕ್ಕೆ ಏರಿಸಬೇಕಿದೆ. ಒಟ್ಟಾರೆ 300 ಸಿಬ್ಬಂದಿ ಹೆಚ್ಚುವರಿಯಾಗಿ ನಿಯೋಜಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಎಸಿಬಿ ಹಿರಿಯ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ.