ಬೆಂಗಳೂರು:ಕೃಷಿ ಸುಧಾರಣೆಗೆ ಸಂಬಂಧಿಸಿದ ಮೂರು ಕಾಯ್ದೆಗಳು ರೈತ ವಿರೋಧಿಯಲ್ಲ. ರೈತರೇ ಇವುಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಯ್ದೆಗಳನ್ನು ವಾಪಸ್ ಪಡೆದಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿಳಿಸಿದರು.
ಇಲ್ಲಿನ ಸರ್ವಜ್ಞನಗರ ಸೀತಾರಾಮ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನ್ನದಾತರ ಹಿತದೃಷ್ಟಿಯಿಂದ ಈ ಕಾಯ್ದೆಗಳನ್ನು ಜಾರಿ ಮಾಡಲಾಗಿತ್ತು. ಇವುಗಳ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡಲು ಸಾಧ್ಯವಾಗಲಿಲ್ಲ. ದೇಶವಿರೋಧಿ ಶಕ್ತಿಗಳು ಈ ಕಾಯ್ದೆಗಳ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಬಾರದೆಂಬ ಕಾರಣಕ್ಕಾಗಿ ಹಿಂದಕ್ಕೆ ಪಡೆಯಲಾಗಿದೆ ಎಂದರು.
ರೈತರು ಎಲ್ಲಿ ಬೇಕಾದರೂ ಉತ್ಪನ್ನ ಮಾರಾಟ ಮಾಡಲು ಅವಕಾಶ ನೀಡುವುದು ರೈತ ವಿರೋಧಿ ಕ್ರಮವೇ?. ಪ್ರತಿಪಕ್ಷಗಳು ಕಾಯ್ದೆಗಳು ರೈತವಿರೋಧಿ ಎಂಬ ಭ್ರಮೆಯನ್ನು ಹುಟ್ಟಿಸುವ ಕೆಲಸ ಮಾಡಿವೆ. ಒಂದಲ್ಲ ಒಂದು ದಿನ ಕೃಷಿ ಸುಧಾರಣಾ ಕಾಯ್ದೆ ವಿಷಯ ಜನರಿಗೆ ಅರ್ಥವಾಗಲಿದೆ. ಆಗ ರೈತರೇ ಬೀದಿಗಿಳಿದು ಈ ಇವುಗಳನ್ನು ಜಾರಿಗೊಳಿಸಲು ಒತ್ತಾಯಿಸುವ ದಿನ ಬರಲಿದೆ ಎಂದು ಭವಿಷ್ಯ ನುಡಿದರು.