ಬೆಂಗಳೂರು: ಸಾಹಿತಿಗಳಿಂದ ಸರಣಿಯೋಪಾದಿಯಲ್ಲಿ ಪಠ್ಯದಿಂದ 'ಪದ ವಾಪಸಿ' ಒತ್ತಾಯ ಆರಂಭವಾಗಿದೆ. ಬಿಜೆಪಿ ಸರ್ಕಾರ ಪಠ್ಯ ಪುಸ್ತಕ ಪರಿಷ್ಕರಣೆ ಹೆಸರಲ್ಲಿ ಕೇಸರೀಕರಣಕ್ಕೆ ಕೈ ಹಾಕಿದೆ ಎಂಬ ಆರೋಪದೊಂದಿಗೆ ಕೆಲ ಸಾಹಿತಿಗಳು ಪಠ್ಯದಿಂದ ತಮ್ಮ ಪಠ್ಯಾಂಶಗಳನ್ನು ತೆಗೆಯುವಂತೆ ಪತ್ರ ಬರೆದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಆದರೆ, ಸಾಹಿತಿಗಳ ಪದ ವಾಪಸಿ ಒತ್ತಾಯ ಸಾಂಕೇತಿಕ ಪ್ರತಿಭಟನೆಗೆ ಸೀಮಿತವಾಗಲಿದ್ದು, ವಾಸ್ತವದಲ್ಲಿ ಪದ ವಾಪಸಿ ಅಸಾಧ್ಯವಾಗಿದೆ.
ರಾಜ್ಯ ಬಿಜೆಪಿ ಸರ್ಕಾರ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ರಚಿಸಿತ್ತು. ಈ ಸಮಿತಿಗೆ 6 ರಿಂದ 10ನೇ ತರಗತಿವರೆಗಿನ ಸಮಾಜ ವಿಜ್ಞಾನ ಪಠ್ಯ ಪುಸ್ತಕ ಪರಿಷ್ಕರಣೆ, 6 ರಿಂದ 10ನೇ ತರಗತಿವರೆಗಿನ ಕನ್ನಡ ಪಠ್ಯ ಪುಸ್ತಕ ಪರಿಷ್ಕರಣೆ ಹಾಗೂ 3ನೇ ತರಗತಿಯ ಪರಿಸರ ಅಧ್ಯಯನ ಪಠ್ಯ ಪುಸ್ತಕಗಳ ಪರಿಷ್ಕರಣೆಯ ಜವಾಬ್ದಾರಿ ನೀಡಲಾಗಿತ್ತು. ಪಠ್ಯ ಪರಿಷ್ಕರಣೆ ಹೆಸರಲ್ಲಿ ಬಿಜೆಪಿ ಸರ್ಕಾರ ಕೇಸರೀಕರಣ ಮಾಡುತ್ತಿದೆ ಎಂಬುದು ಸದ್ಯ ಕೇಳಿಬರುತ್ತಿರುವ ಆರೋಪ.
ರಾಜ್ಯದಲ್ಲಿ ಪಠ್ಯಪುಸ್ತಕ ವಿವಾದವು ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ರಾಜ್ಯದ ಹಲವು ಹಿರಿಯ ಸಾಹಿತಿಗಳು ಪಠ್ಯದಲ್ಲಿ ತಮ್ಮ ಕತೆ, ಕವಿತೆ ಹಾಗೂ ಲೇಖನ ಬೋಧಿಸುವುದು ಬೇಡ ಎಂದು ಪತ್ರ ಚಳವಳಿ ನಡೆಸುತ್ತಿದ್ದಾರೆ. ಪಠ್ಯ ಪರಿಷ್ಕರಣೆ ಹೆಸರಲ್ಲಿ ಕೇಸರೀಕರಣ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿರುವ ಬೆನ್ನಲ್ಲೇ ಹಲವು ಸಾಹಿತಿಗಳು ಪಠ್ಯದಿಂದ 'ಪದ ವಾಪಸಿ'ಗೆ ಒತ್ತಾಯಿಸಿ ಶಿಕ್ಷಣ ಸಚಿವರಿಗೆ ಪತ್ರವನ್ನು ಬರೆಯುತ್ತಿದ್ದಾರೆ.
ತಾವು ಬರೆದ ಅಂಶವನ್ನು ಪಠ್ಯದಿಂದ ವಾಪಸ್ ಪಡೆಯುವಂತೆ ದಿನ ನಿತ್ಯ ಸಾಹಿತಿಗಳು ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸುತ್ತಿದ್ದಾರೆ. ಸಾಹಿತಿ ದೇವನೂರು ಮಹಾದೇವ, ಜಿ.ರಾಮಕೃಷ್ಣ, ಎಚ್.ಎಸ್. ಅನುಪಮ, ಎಸ್.ಜಿ.ಸಿದ್ದರಾಮಯ್ಯ, ಸಾಹಿತಿ ಬೊಳುವಾರು ಮಹಮದ್ ಕುಂಞ, ಮುಡ್ನಾಕೂಡು ಚಿನ್ನಸ್ವಾಮಿ ಹಾಗೂ ಈರಣ್ಣ ಕಂಬಳಿ ಮುಂತಾದವರು ಪಠ್ಯದಲ್ಲಿರುವ ತಮ್ಮ ಕೃತಿಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದ್ದಾರೆ.
ಶಿಕ್ಷಣ ಇಲಾಖೆ ಪ್ರಕಾರ ಪದ ವಾಪಸಾತಿ ಅಸಾಧ್ಯ:ಹಲವು ಪ್ರಮುಖ ಸಾಹಿತಿಗಳು ಪಠ್ಯದಿಂದ ತಮ್ಮ ಕೃತಿಗಳನ್ನು ವಾಪಸ್ ಪಡೆಯುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ. ಆದರೆ, ಶಿಕ್ಷಣ ಇಲಾಖೆ ಈಗ ಪಠ್ಯದಿಂದ ಪದ ವಾಪಸಿ ಅಸಾಧ್ಯ ಎಂದು ಹೇಳುತ್ತಿದೆ.