ಬೆಂಗಳೂರು: ಪಠ್ಯಪುಸ್ತಕಗಳನ್ನು ಪರಿಷ್ಕರಿಸಿ ಮಕ್ಕಳಿಗೆ ನೀಡುವ ವಿಷಯದಲ್ಲಿ ಸರ್ಕಾರ ಅಜಾಗರೂಕತೆ ಹಾಗೂ ಅಪ್ರಬುದ್ಧತೆಯಿಂದ ನಡೆದುಕೊಂಡಿದೆ ಎಂದು ಜೆಡಿಯು ಪಕ್ಷದ ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ದೂರಿದ್ದಾರೆ.
ಶನಿವಾರ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದ ಪಠ್ಯಪುಸ್ತಕಗಳನ್ನು ಮರು ಪರಿಷ್ಕರಣೆ ಮಾಡುವ ಕುರಿತು ಸರ್ಕಾರ ತೋರುತ್ತಿರುವ ಧೋರಣೆ ತಪ್ಪು. ಬೆಳೆಯುವ ಈ ಮಕ್ಕಳು ನಾಡಿನ ಮುಂದಿನ ಪೀಳಿಗೆ, ಪ್ರಜಾಪ್ರಭುತ್ವ, ನಮ್ಮ ದೇಶವನ್ನು ನಡೆಸುವವರಾಗಿದ್ದಾರೆ. ಮಕ್ಕಳ ಹೃದಯದಲ್ಲಿ ಶಿಕ್ಷಣದ ಮೂಲಕ ಜ್ಞಾನ, ವೈಚಾರಿಕತೆ, ಬೆಳಸಬೇಕು. ಅದನ್ನು ಹೊರತುಪಡಿಸಿ ಕೋಮುವಾದ, ಗೊಂದಲಮಯವಾದ ವಿಷಯಗಳನ್ನು ಅವರ ಮನಸ್ಸಿನಲ್ಲಿ ಬಿತ್ತಬಾರದು. ಪಕ್ಷಗಳ ನಡುವಿನ ನಿಲುವನ್ನು ಮಕ್ಕಳ ಮೇಲೆ ಹೇರಬಾರದು ಎಂದು ಹೇಳಿದರು.