ಬೆಂಗಳೂರು: ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಆಡಳಿತಾಧಿಕಾರಿ ಸುಧಾ ಅವರ ಮನೆ ಹಾಗೂ ಆಪ್ತರ ಮನೆ ಮೇಲೆ ಕಳೆದ ಕೆಲ ದಿನಗಳಿಂದ ದಾಳಿ ನಡೆಸಲಾಗಿದ್ದು, ಸದ್ಯ ಈ ದಾಳಿ ಮುಕ್ತಾಯವಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಎಸಿಬಿ ಅಧಿಕಾರಿಗಳು ಎರಡು ವಾರಗಳಿಂದ ದಾಳಿಯಲ್ಲಿ ನಿರತರಾಗಿ ಸದ್ಯ ಅಕ್ರಮ ಆಸ್ತಿ ಸಂಬಂಧ ಬಹಳಷ್ಟು ದಾಖಲಾತಿಗಳನ್ನ ಜಪ್ತಿ ಮಾಡಿದ್ದಾರೆ. ಸದ್ಯ ಜಪ್ತಿ ಮಾಡಿದ ದಾಖಲಾತಿಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಹಾಗೆ ಅಗತ್ಯವಿದ್ದಲ್ಲಿ ಸುಧಾ ಅವರನ್ನ ಎಸಿಬಿ ಕಚೇರಿಗೆ ಕರೆಸಿ ವಿಚಾರಣೆ ನಡೆಸಲಾಗುತ್ತದೆ ಎನ್ನಲಾಗ್ತಿದೆ.
ಓದಿ:ಪರಪ್ಪನ ಅಗ್ರಹಾರದಲ್ಲಿ ಎರಡು ರಾತ್ರಿ ಕಳೆದ ಬೇಗ್: ಇಂದು ಜಾಮೀನು ಅರ್ಜಿ ವಿಚಾರಣೆ
ಬಿಡಿಎ ಕಚೇರಿಯಲ್ಲಿ ಕೆ.ಎ.ಎಸ್ ಅಧಿಕಾರಿಯಾಗಿ ಕೆಲಸ ನಿರ್ವಹಣೆ ಮಾಡುತ್ತಿರುವ ವೇಳೆ ಸುಧಾ ಅಕ್ರಮ ಆಸ್ತಿ ಗಳಿಕೆ ಮಾಡಿದ್ದಾರೆ ಎಂಬ ಆರೋಪವಿದೆ. ಹಾಗೆ ಬಹುತೇಕ ಮಂದಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಯಾವುದೇ ಕೆಲಸಗಳು ಆಗಬೇಕಾದರೂ ಸುಧಾ ಅವರಿಗೆ ಹಣ ನೀಡಬೇಕಿತ್ತು ಎನ್ನುವ ಆರೋಪವಿದೆ.
ಪ್ರಕರಣ : ಕೆ.ಎ.ಎಸ್ ಅಧಿಕಾರಿಯಾಗಿರುವ ಸುಧಾ ಅಕ್ರಮವಾಗಿ ಆಸ್ತಿ ಗಳಿಕೆ ಮಾಡಿದ ಕಾರಣ 2019 ರಲ್ಲಿ ಸಾಮಾಜಿಕ ಕಾರ್ಯಕರ್ತ ಅಬ್ರಾಂ ಎಸಿಬಿಗೆ ದೂರು ನೀಡಿದ್ದರು. ಕಳೆದ ಜನವರಿಯಲ್ಲಿ ಮತ್ತೆ ದೂರು ನೀಡಿದ್ದು, ನಂತರ ಜೂನ್ ನಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಲಯ ತನಿಖೆ ನಡೆಸುವಂತೆ ಎಸಿಬಿಗೆ ತಿಳಿಸಿತ್ತು. ಹಾಗೆ ಸುಧಾಗೆ ಮೇಲಾಧಿಕಾರಿಗಳು ಭ್ರಷ್ಟಾಚಾರ ಕುರಿತು ವಾರ್ನ್ ಮಾಡಿದ್ದರು ಎನ್ನಲಾಗ್ತಿದೆ. ಯಾರ ಮಾತಿಗೂ ಬೆಲೆ ಕೊಡದೆ ಹಣಕ್ಕೆ ಬೇಡಿಕೆ ಇಟ್ಟು ಅಕ್ರಮ ಆಸ್ತಿ ಗಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.