ಬೆಂಗಳೂರು:ನಗರದ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಮತ್ತೀಕೆರೆಯಲ್ಲಿ ಹೈಟೆಕ್ ಸಾರ್ವಜನಿಕ ಆಸ್ಪತ್ರೆ ನಿರ್ಮಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಅಲ್ಲಿ ಕೆಪಿಟಿಸಿಎಲ್ ತನ್ನ ಅಧೀನದಲ್ಲಿರುವ 10 ಸಾವಿರ ಚದರ ಅಡಿ ಜಾಗವನ್ನು ಆದಷ್ಟು ಬೇಗನೆ ಬಿಬಿಎಂಪಿಗೆ ಹಸ್ತಾಂತರಿಸಬೇಕು. ಇದಕ್ಕೆ ಬದಲಾಗಿ ಕೆಪಿಟಿಸಿಎಲ್ ಸಂಸ್ಥೆಗೆ ಮಲ್ಲೇಶ್ವರಂನ ಟಿಟಿಡಿ ಸಮೀಪವಿರುವ ಬಿಬಿಎಂಪಿಯ ಜಾಗವನ್ನು ಬಿಟ್ಟುಕೊಡಲಾಗುವುದು ಎಂದು ಕ್ಷೇತ್ರದ ಶಾಸಕರೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬೆಸ್ಕಾಂ ಮತ್ತು ಕೆಪಿಟಿಸಿಎಲ್, ಜಲಮಂಡಲಿ ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿ ಈ ಸೂಚನೆ ನೀಡಿದರು. ಕ್ಷೇತ್ರದ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗಗಳ ಮೇಲಿರುವ ವಿದ್ಯುತ್ ಪರಿವರ್ತಕಗಳನ್ನು ಹೈರೈಸ್ಡ್-ಟ್ರಾನ್ಸ್ ಫಾರ್ಮರ್ಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಈಗಾಗಲೇ 190 ಪರಿವರ್ತಕಗಳನ್ನು ಹೀಗೆ ಮಾಡಲಾಗಿದ್ದು, ಇನ್ನೂ 120 ಪರಿವರ್ತಕಗಳ ಕೆಲಸ ಬಾಕಿ ಇದೆ. ಇದನ್ನೆಲ್ಲ ಏಪ್ರಿಲ್ ಒಳಗೆ ಮುಗಿಸಿ ಪಾದಚಾರಿಗಳ ಸುಗಮ ಓಡಾಟಕ್ಕೆ ಅವಕಾಶ ಮಾಡಿಕೊಡಬೇಕು ಎಂದು ನಿರ್ದೇಶಿಸಿದರು.
ಸ್ಯಾಂಕಿ ಕೆರೆಯ ಸೌಂದರ್ಯೀಕರಣ ಕಾಮಗಾರಿ:ಮಲ್ಲೇಶ್ವರಂನಲ್ಲಿರುವ ಸ್ಯಾಂಕಿ ಕೆರೆಯ ಸೌಂದರ್ಯೀಕರಣ ಕಾಮಗಾರಿ ಪ್ರಗತಿಯಲ್ಲಿದೆ. ಈ ಕಾಮಗಾರಿಯ ಮುಕ್ತಾಯಕ್ಕೆ ಏಪ್ರಿಲ್ ತಿಂಗಳವರೆಗೆ ಅಧಿಕಾರಿಗಳಿಗೆ ಗಡುವು ನೀಡಿದರು.