ಬೆಂಗಳೂರು :ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಇಂದಿನಿಂದ ಮತ್ತೆ ಹೋರಾಟ ಆರಂಭಿಸಲು ಮುಂದಾಗಿದ್ದ ಕೂಡಲಸಂಗಮ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಶ್ರೀಗಳ ಮನವೊಲಿಸುವಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಫಲರಾಗಿದ್ದಾರೆ. ಹಾಗಾಗಿ, ಹೋರಾಟವನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲಾಗಿದೆ.
ಸಿಎಂ ಭೇಟಿಯಾದ ಕೂಡಲಸಂಗಮ ಶ್ರೀಗಳು ಬೆಳಗ್ಗೆ ಬಸವಜಯ ಮೃತ್ಯುಂಜಯ ಶ್ರೀಗಳ ಜತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಡೆಸಿದ ಮಾತುಕತೆ ಫಲಪ್ರದವಾಗಿದೆ. ಸುದೀರ್ಘ ಮಾತುಕತೆ ವೇಳೆ ಪ್ರಸ್ತುತ ಇರುವ ಸನ್ನಿವೇಶ, ಕಾನೂನು ಸಂದಿಗ್ಧ ಸ್ಥಿತಿ ಸೇರಿದಂತೆ ಎಲ್ಲ ಆಯಾಮಗಳಲ್ಲಿ ಸಮಾಲೋಚನೆ ನಡೆಸಿದರು. ಮೀಸಲಾತಿ ವಿಚಾರದಲ್ಲಿ ಸರ್ಕಾರ ಸಕಾರಾತ್ಮಕವಾಗಿದೆ. ಹಾಗಾಗಿ, ಮತ್ತೆ ಹೋರಾಟ ಆರಂಭಿಸಬೇಡಿ ಎಂದು ಸಿಎಂ ಮನವಿ ಮಾಡಿದರು.
ಇದನ್ನೂ ಓದಿ:ಪಂಚಮಸಾಲಿ ಮೀಸಲು ಹೋರಾಟ: ಸಿಎಂ ಬೊಮ್ಮಾಯಿ ಭೇಟಿಯಾದ ಕೂಡಲಸಂಗಮ ಶ್ರೀ
ಸಿಎಂ ಮನವಿಗೆ ಸ್ಪಂದಿಸಿದ ಶ್ರೀಗಳು, ಸಮುದಾಯದ ಪ್ರಮುಖರ ಜತೆ ಮಾತುಕತೆ ನಡೆಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿಗೆ ಸಮ್ಮತಿ ನೀಡುವ ನಿರ್ಧಾರ ಕೈಗೊಳ್ಳಲಾಯಿತು. ಬೊಮ್ಮಾಯಿ ಅವರ ಮೇಲೆ ವಿಶ್ವಾಸವಿರಿಸಿ ಕಾದು ನೋಡುವ ನಿರ್ಧಾರಕ್ಕೆ ಬರಲಾಯಿತು. ಅಲ್ಲದೇ ಹೋರಾಟವನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡುವ ಬಗ್ಗೆಯೂ ನಿರ್ಣಯಿಸಿ ಪ್ರಕಟಿಸಲಾಯಿತು.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಸವಜಯ ಮೃತ್ಯುಂಜಯ ಶ್ರೀಗಳು, ಲಿಂಗಾಯತ ಪಂಚಮಸಾಲಿ 2ಎ ಮೀಸಲಾತಿ ಸತ್ಯಾಗ್ರಹ ಮಾಡುವಾಗ ಸಿಎಂ, ಸಭಾಧ್ಯಕ್ಷರು ಮನವಿ ಮಾಡಿದ್ದರು. 6 ತಿಂಗಳಲ್ಲಿ ಮೀಸಲಾತಿ ನೀಡದಿದ್ದರೆ ಅ.1ರಂದು ಸತ್ಯಾಗ್ರಹ ಮುಂದುವರೆಸೋಣ ಎಂದು ತೀರ್ಮಾನ ಮಾಡಿದ್ದೆವು.
ನಿನ್ನೆ ದಾವಣಗೆರೆಯ ಸಮಾವೇಶ ನೋಡಿ ಸರ್ಕಾರ ಬೆಚ್ಚಿದೆ. ಹೀಗಾಗಿ, ಸಿಎಂ ನಮ್ಮನ್ನು 9 ಗಂಟೆಗೆ ಆಹ್ವಾನ ನೀಡಿ ಮಾತುಕತೆ ನಡೆಸಿದರು. ಒಂದೂವರೆ ಗಂಟೆ ಸುದೀರ್ಘವಾಗಿ ಚರ್ಚೆ ಮಾಡಿದ್ದೇವೆ. ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿದ್ದ ಮೀಸಲಾತಿಯ ಅಧಿಕಾರ ರಾಜ್ಯಕ್ಕೆ ನೀಡಿದೆ. ಕಾನೂನಿನ ತಿದ್ದುಪಡಿ ಮಾಡಿ ರಾಜ್ಯಕ್ಕೆ ಅವಕಾಶ ನೀಡಿದೆ. ಹಿಂದುಳಿದ ವರ್ಗದ ವರದಿ ಕೊಟ್ಟ ಬಳಿಕ ಮೀಸಲಾತಿ ಕೊಡುತ್ತೇವೆ ಎಂದು ಸಿಎಂ ಭರವಸೆ ನೀಡಿದ್ದಾರೆ.
ಮೀಸಲಾತಿ ಕೊಟ್ಟ ಬಳಿಕ ಕಾನೂನಿನ ತೊಡಕು ಆಗಬಾರದು. ಹೀಗಾಗಿ, ಸಮಯಾವಕಾಶ ತೆಗೆದುಕೊಳ್ಳುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಸಚಿವ ಸಿ ಸಿ ಪಾಟೀಲ್ ಜವಾಬ್ದಾರಿಯಿಂದ ಇಂದಿನಿಂದ ಕರೆದಿದ್ದ ಸತ್ಯಾಗ್ರಹ ಮುಂದೂಡುತ್ತಿದ್ದೇವೆ ಎಂದರು.
ಶಾಶ್ವತ ಹಿಂದುಳಿದ ವರ್ಗದ ಆಯೋಗದ ವರದಿ ಬಂದ 3 ತಿಂಗಳೊಳಗೆ ಮೀಸಲಾತಿ ಕೊಡಬೇಕು ಎಂದು ಸರ್ಕಾರಕ್ಕೆ ತಿಳಿಸಿದ್ದೇವೆ. ಅವರು ಒಪ್ಪಿದ್ದಾರೆ. ಒಂದು ವೇಳೆ 3 ತಿಂಗಳ ಒಳಗೆ ಮೀಸಲಾತಿ ನೀಡದಿದ್ದರೆ, ಬೆಂಗಳೂರಿನಲ್ಲಿ ಸತ್ಯಾಗ್ರಹ ಮುಂದುವರೆಸುತ್ತೇವೆ. ಮೀಸಲಾತಿಯ ಅಭಿಯಾನ ಗ್ರಾಮ, ತಾಲೂಕು ಮಟ್ಟದಲ್ಲಿ ನಡೆಸುತ್ತೇವೆ. ಸದ್ಯ ತಾತ್ಕಾಲಿಕವಾಗಿ ಸತ್ಯಾಗ್ರಹ ಕೈಬಿಟ್ಟಿದ್ದೇವೆ ಎಂದರು.
ಯಡಿಯೂರಪ್ಪ ಅವರು ಈ ಹಿಂದೆ ನಮ್ಮ ಹೋರಾಟವನ್ನ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ, ಬಸವರಾಜ ಬೊಮ್ಮಾಯಿಯವರು ನಮ್ಮ ಬೇಡಿಕೆಯನ್ನ ಗಂಭೀರವಾಗಿ ತೆಗೆದುಕೊಂಡು ನಮ್ಮನ್ನು ಕರೆಸಿ ಮಾತುಕತೆ ನಡೆಸಿ ಭರವಸೆ ನೀಡಿದ್ದಾರೆ. ವರದಿ ಎರಡು ಮೂರು ತಿಂಗಳಲ್ಲಿ ಬರಬಹುದು. ಮುಂದೆ ಉಪ ಚುನಾವಣೆ ನಡೆಯುತ್ತಿದೆ. ಹೀಗಾಗಿ, ಪಂಚಮಸಾಲಿ ಸಮುದಾಯವನ್ನ ಎದುರು ಹಾಕಿಕೊಳ್ಳುವುದು ಬೇಡ ಎಂದು ಅವರು ತಿಳಿದಿದ್ದಾರೆ. ಹೀಗಾಗಿ, ಅವರು ಹೆಚ್ಚಿನ ವಿಳಂಬ ಮಾಡಲಾರರು ಎಂಬ ವಿಶ್ವಾಸ ಇದೆ. ನಾವು ಕಾದು ನೋಡುತ್ತೇವೆ ಎಂದರು.
ಮಾಜಿ ಸಚಿವ ವಿನಯ್ ಕುಲಕರ್ಣಿ ಅನುದಾನ ಬೇಕಾ ಎಂದು ಕೇಳಿದ್ದರು. ಆದರೆ, ನಾನು ಯಾವತ್ತು ಅನುದಾನ ಕೇಳಿಲ್ಲ. ನನಗೆ ಮೊದಲು ಮೀಸಲಾತಿ ಬೇಕು. ಆ ಮೀಸಲಾತಿ ಪಡೆದುಕೊಳ್ಳಲು ನಿರಂತರ ಹೋರಾಟ ಮಾಡೋಣ. ಅನುದಾನ ಪಡೆದು ಮಠ ಕಟ್ಟುವ ಉದ್ದೇಶ ಇದ್ದಿದ್ದರೆ ಚಿನ್ನದ ಮಠ ಕಟ್ಟುತಿದ್ದೆ. ಆದರೆ, ನನಗೆ ಸಮಾಜಕ್ಕೆ ಒಳ್ಳೆಯದು ಮಾಡಬೇಕೆಂಬ ಉದ್ದೇಶ ಅಷ್ಟೇ ಎಂದು ಜಯಮೃತ್ಯುಂಜಯ ಸ್ವಾಮೀಜಿ ಸ್ಪಷ್ಟಪಡಿಸಿದರು.
ಇದನ್ನೂ ಓದಿ:ಬೇರೆ ಸ್ವಾಮೀಜಿಗಳಂತೆ ಹೋರಾಟದಿಂದ ಓಡಿ ಹೋಗಲಿಲ್ಲ: ಬಸವ ಜಯಮೃತ್ಯುಂಜಯ ಶ್ರೀ